Share this news

 

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಡಿಲಿಮಿಟೇಶನ್ ಮತ್ತು ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದೆ.ಈ ಮೂಲಕ ಲೋಕಸಭೆ ಚುನಾವಣೆ ಯವರೆಗೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಯೋಚನೆಯಲ್ಲಿದ್ದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.ಇದಲ್ಲದೇ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಕೂಡ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ಕುರಿತಂತೆ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸಂವಿಧಾನದ ನಿಯಮದಂತೆ ಚುನಾವಣೆ ನಡೆಸಬೇಕು. ಈಗಾಗಲೇ 10 ವಾರ ಕಾಲಾವಕಾಶ ನೀಡಲಾಗಿದೆ. ಈಗ 4 ವಾರಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಅಂತಿಮಗೊಳಿಸಬೇಕು. ಇದು ಕೊನೆಯ ಗಡುವು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಪಂಚಾಯತಿ ಚುನಾವಣೆಗೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಚುನಾವಣೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅಂತಿಮವಾಗಿ ಒಂದು ತಿಂಗಳ ಗಡುವು ನೀಡಲಾಗುವುದು ಎಂದು ಹೈಕೋರ್ಟ್ ಹೇಳಿದೆ.

ಸಾಂವಿಧಾನಿಕ ಹೊಣೆಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯನ್ನು ತ್ವರಿತವಾಗಿ ನಡೆಸಬೇಕು ಎಂದು ಹೇಳಿದ ಹೈಕೋರ್ಟ್, ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಿದೆ.

ಶಾಸನಬದ್ಧ ಆದೇಶದೊಂದಿಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಎರಡು ಬಾರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

 

 

 

 

 

 

 

 

Leave a Reply

Your email address will not be published. Required fields are marked *