ಕಾರ್ಕಳ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬಡ ರಿಕ್ಷಾ ಚಾಲಕರಾದ ಶ್ರೀಕಾಂತ್ ಕುಚ್ಚೂರು ಸ್ಪರ್ಧಿಸುತ್ತಿದ್ದು ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಕಾರ್ಕಳದ ಮತದಾರರಲ್ಲಿ ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ವಿನಂತಿಸಿದರು.
ಕಾರ್ಕಳದ ಹೋಟೆಲ್ ಪ್ರಕಾಶ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತನಾಗಿ, ಆಟೋರಿಕ್ಷಾ ಚಾಲಕನಾಗಿ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಆ ಮೂಲಕ ಹೆಬ್ರಿ ಭಾಗದಲ್ಲಿ ಜನಮನ್ನಣೆ ಗಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚಿನ ಜನರಿಗೆ ಸೇವೆಯನ್ನು ನೀಡಿ ಜನರೊಂದಿಗೆ ಇದ್ದು ಸೇವಾಕಾರ್ಯವನ್ನು ಮಾಡುವುದರೊಂದಿಗೆ ವೇಷ ಹಾಕಿ ಆ ಮೂಲಕ ಧನ ಸಂಗ್ರಹಿಸಿ ಬಡಜನರ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಮಾಡುವುದರ ಮೂಲಕ ಸಾಮಾಜಿಕ ಸೇವೆಯಲ್ಲಿ ತನ್ನ ಚಾಪನ್ನು ಮೂಡಿಸಿದ್ದಾರೆ. ಇಂತಹ ಸಾಮಾನ್ಯ ಕಾರ್ಯಕರ್ತನನ್ನು ಕಾರ್ಕಳ ಕ್ಷೇತ್ರದಿಂದ ಚುನಾಯಿಸಿ ಕಳುಹಿಸುವಂತೆ ಅವರು ಮತದಾರರಲ್ಲಿ ವಿನಂತಿಸಿದರು.
ಜೆಡಿಎಸ್ ಬಡವರ ಹಾಗೂ ರೈತರ ಪಕ್ಷ ವಾಗಿದ್ದು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಸಮ್ಮಿಶ್ರ ಸರಕಾರದ ಅವಧಿಯ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದು ವಿಧವಾವೇತನ, ವೃದ್ಧಾಪ್ಯವೇತನ ಹೆಚ್ಚಳ, ಸಾಲ ಮನ್ನಾ ಯೋಜನೆ, ಗ್ರಾಮದರ್ಶನ ಮಾಡುವ ಮೂಲಕ ಚುನಾವಣಾ ಪೂರ್ವದಲ್ಲಿ ನೀಡಿದ ವಚನಗಳನ್ನು ಈಡೇರಿಸಲು ಸಫಲರಾಗಿದ್ದಾರೆ. ಸಮ್ಮಿಶ್ರ ಸರಕಾರದಲ್ಲಿ ಸಾಲ ಮನ್ನಾ ಮಾಡುವ ಕುರಿತು ಕಾಂಗ್ರೆಸ್ ವಿರೋಧ ನಡುವೆಯೂ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಕೃಷಿಕರಿಗೆ ಜೆಡಿಎಸ್ ಬೆಂಬಲವಾಗಿ ನಿಂತಿದೆ ಎಂದರು.
ಕಾರ್ಕಳದ ಎಣ್ಣೆಹೊಳೆ ಏತನೀರಾವರಿ ಯೋಜನೆ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಯಾಗಿದೆ. ಸರಿಯಾದ ಸ್ಥಳದಲ್ಲಿ ಯೋಜನೆ ಅನುಷ್ಠಾನವಾಗದೇ ಈ ಯೋಜನೆ ವಿಫಲವಾಗಿದೆ ಎಂದರು.ಪಂಚರತ್ನ ಯೋಜನೆಯಡಿ 5 ಉಚಿತ ಗ್ಯಾಸ್ ಸಿಲೆಂಡರ್, ಶಿಕ್ಷಣದ ಉನ್ನತಿಕರಣ, ಮಹಿಳೆ, ಯುವಜನರ ಸಬಲೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಈಗಾಗಲೇ ತಿಳಿಸಲಾಗಿದೆ. ರೈತ ಚೈತನ್ಯ ಯೋಜನೆಯಡಿ ಕೃಷಿಕರಿಗೆ ಉತ್ತಮ ಗುಣಮಟ್ಟದ ಗೊಬ್ಬರ ಬೀಜಗಳನ್ನು ವಿತರಿಸುವ ಯೋಜನೆಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯು ಹಿಂದುತ್ವ ಅಜೆಂಡದ ಮೇಲೆ ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸುತ್ತಿದೆ ಹೊರತು ಅಭಿವೃದ್ಧಿಯಿಂದಲ್ಲ. ಅವರಿಗೆ ಹಿಂದುತ್ವ ಮುಖ್ಯವೇ ಹೊರತು ಅಭಿವೃದ್ಧಿ ಮುಖ್ಯವಲ್ಲ ಎಂದರು.
ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ್ ಕುಚ್ಚೂರು ಮಾತನಾಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದಂದಿನಿಂದ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿ ಇದೀಗ ಕಾರ್ಕಳ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಕಾರ್ಕಳ ಕ್ಷೇತ್ರದಲ್ಲಿ ಹಲವಾರು ಹೋರಾಟಗಳನ್ನು ಮಾಡಲಾಗಿದೆ. ಕೊರೊನಾ ಸಂದರ್ಭ ಸಾಮಾಜಿಕ ಸೇವೆಗಳನ್ನು ಮಾಡುವುದರ ಮೂಲಕ ತನ್ನಿಂದಾದಷ್ಟು ಸಹಾಯ ಮಾಡಿರುವುದಾಗಿ ತಿಳಿಸಿ ಇನ್ನಷ್ಟು ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಮತದಾರರು ನನ್ನನ್ನು ಚುನಾಯಿಸುವಂತೆ ವಿನಂತಿಸಿದರು.
ಜಿಲ್ಲಾ ಉಸ್ತುವಾರಿ ಪ್ರವೀಣ್ ಚಂದ್ರ ಜೈನ್, ಸಂಘಟನಾ ಕಾರ್ಯದರ್ಶಿ ಸೈಯದ್ ಹರ್ಷದ್, ಹರೀಶ್ ಮುದ್ರಾಡಿ ಉಪಸ್ಥಿತರಿದ್ದರು.