ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸುತ್ತಿರುವ ಸಮೀಕ್ಷೆಗೆ ತಡೆ ನೀಡುವಂತೆ ಕೋರಿ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಹಾಗಾಗಿ ಸಮೀಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದಿದೆ.
ಶುಕ್ರವಾರ ಮತ್ತೆ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಸಮೀಕ್ಷೆ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಸಮೀಕ್ಷೆಗೆ ತಡೆ ನೀಡುವ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು ಈ ಹಂತದಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ಸಮೀಕ್ಷೆಯ ಸಂದರ್ಭದಲ್ಲಿ ಯಾವುದೇ ಸ್ಥಳದಲ್ಲಿ ಯಾವುದೇ ಹಾನಿಯಾಗುವುದಿಲ್ಲ ಎಂದು ಪುರಾತತ್ವ ಇಲಾಖೆ ಭರವಸೆ ನೀಡಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.ಅಲ್ಲದೇ ಸಮೀಕ್ಷೆಯಿಂದ ಸಾಕ್ಷ್ಯ ಹೊರಬರಲಿದೆ ಎಂದು ನ್ಯಾಯಪೀಠ ಹೇಳಿದೆ.
ಮುಸ್ಲಿಂ ಆಡಳಿತ ಕಮಿಟಿಯಿಂದ ಆಕ್ಷೇಪ ವ್ಯಕ್ತವಾದಾಗ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಎಸ್ಜಿ ಅವರ ಹೇಳಿಕೆಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಎಎಸ್ಐ ತನ್ನ ಸಮೀಕ್ಷೆಯನ್ನ ಮುಂದುವರಿಸುತ್ತದೆ, ನ್ಯಾಯಾಲಯದ ಆದೇಶವಿಲ್ಲದೇ ಯಾವುದೇ ಉತ್ಖನನ ಮಾಡುವುದಿಲ್ಲ ಎಂದು ಎಸ್ಜಿ ಹೇಳಿಕೆ ನೀಡಿದರು. ಜಿಪಿಆರ್ ಸಮೀಕ್ಷೆಯಲ್ಲಿ ತಜ್ಞರು ಉಪಸ್ಥಿತರಿದ್ದು, ವಿಡಿಯೋಗ್ರಫಿ ಕೂಡ ಮಾಡಲಾಗುವುದು. ಸಮೀಕ್ಷೆ ಕೇವಲ ದಾಖಲೆಯಾಗದೇ, ಎರಡೂ ಕಕ್ಷಿದಾರರಿಗೂ ಪ್ರಮುಖ ಸಾಕ್ಷಿಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆಯ ವೇಳೆ ಮುಸ್ಲಿಂ ಪರ ವಕೀಲ ಹುಝೈಫಾ, ಮಸೀದಿಯಲ್ಲಿರುವ ಕಾರಂಜಿ ಪ್ರದೇಶವನ್ನು ಸಂರಕ್ಷಿಸಲು ನೀವು ಆದೇಶ ನೀಡಿದ್ದೀರಿ ಎಂದು ಹೇಳಿದರು. ಈ ಬಗ್ಗೆ ನಮಗೆ ನೆನಪಿದೆ ಎಂದು ಸಿಜೆಐ ಹೇಳಿದ್ದಾರೆ. ಎಎಸ್ಐ ಭರವಸೆಯನ್ನು ಹೈಕೋರ್ಟ್ ದಾಖಲಿಸಿದೆ. ಈಗ ಏನು ಸಮಸ್ಯೆಯಾಗಿದೆ, ಯಾವುದೇ ತೊಂದರೆ ಆಗುವುದಿಲ್ಲ ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ.