Share this news

ಕಾರ್ಕಳ : ಮಿಯ್ಯಾರು ಗ್ರಾಮ ಪಂಚಾಯತು ವ್ಯಾಪ್ತಿಯ ಕಜೆ ಎಂಬಲ್ಲಿನ ಆಟದ ಮೈದಾನಕ್ಕೆ ರಾತ್ರಿ ಹೊತ್ತಲ್ಲಿ ಶಟ್ಲ್ ಹಾಗೂ ವಾಲಿಬಾಲ್ ಆಟವಾಡಲು ಅಳವಡಿಸಲಾಗಿದ್ದ ಸುಮಾರು 30 ಫ್ಲಡ್ ಲೈಟ್‌ಗಳನ್ನು ಮಂಗಳವಾರ ಮುಂಜಾನೆ ಏಕಾಎಕಿ ಕಿತ್ತು ಒಯ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆದರೆ ಏಕಾಎಕಿ ಲೈಟ್ ಗಳನ್ನು ತೆಗೆಯಲು ಕಾರಣವೇನೆಂದು ಪರಿಶೀಲಿಸಿದಾಗ ಕಾಮಗಾರಿ ನಡೆಸಿದ ಗುತ್ತಿಗೆದಾರ‌ನಿಗೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಆತ ಲೈಟ್ ಗಳನ್ನು ತೆಗೆದಿರುವ ವಿಚಾರ ಬಯಲಿಗೆ ಬಂದಿದೆ.

ಮಿಯ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇರೆ ಬೇರೆ ಕಾಮಗಾರಿಗಳಿಗೆ 2023ನೇ ಸಾಲಿನ ಜನವರಿ ತಿಂಗಳಲ್ಲಿ ಅಮೃತ ಮಹೋತ್ಸವ ಯೋಜನೆಯಲ್ಲಿ ರೂ 25 ಲಕ್ಷ ಮಂಜೂರುಗೊಂಡಿತ್ತು.
ಇದೇ ಯೋಜನೆಯಲ್ಲಿ ಈ ಮೈದಾನದ ಲೈಟಿಂಗ್ ವ್ಯವಸ್ಥೆಗೆ 3.50 ಲಕ್ಷ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಮೂಲಗಳ ಪ್ರಕಾರ ಈ ಕಾಮಗಾರಿಗೆ ಟೆಂಡರ್ ಆಗದಿದ್ದರೂ ಗುತ್ತಿಗೆದಾರರೊಬ್ಬರು ಅಡ್ವಾನ್ಸ್ ಕಾಮಗಾರಿ ಮಾಡಿದ್ದರು.ಆದರೆ ಈ ಕಾಮಗಾರಿಗೆ ಆಕ್ಷೇಪಣೆ ಸಲ್ಲಿಕೆಯಾದ ಕಾರಣದಿಂದ ತಾಂತ್ರಿಕ ಟೆಂಡರ್ ಪ್ರಕ್ರಿಯೆ ರದ್ದುಪಡಿಸಲಾಗಿತ್ತು. ಆದರೆ ಅಡ್ವಾನ್ಸ್ ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಇದೇ ಕಾರಣಕ್ಕಾಗಿ ಹಣ ಪಾವತಿಯಾಗಿಲ್ಲ ಎನ್ನಲಾಗಿದೆ. ಇದೇ ಕಾರಣದಿಂದ ಗುತ್ತಿಗೆದಾರ ತಾನು ಅಳವಡಿಸಿದ್ದ ವಿದ್ಯುತ್ ದೀಪಗಳನ್ನು ಕೊಂಡೊಯ್ದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಆದರೆ ಮೈದಾನಕ್ಕೆ ಅಳವಡಿಸಲಾಗಿದ್ದ ದೀಪಗಳು ಏಕಾಎಕಿ ಮಾಯವಾದ ಹಿನ್ನೆಲೆಯಲ್ಲಿ ಸ್ಥಳೀಯರು ಇದು ಕಳ್ಳರ ಕೈಚಳಕವಾಗಿರಬಹುದೆಂದು ಶಂಕಿಸಿದ್ದಾರೆ‌.ಇದಲ್ಲದೇ ಈ ವಿಚಾರದಲ್ಲಿ ಸಾಕಷ್ಟು ಪರವಿರೋಧದ ಚರ್ಚೆಗೂ ಗ್ರಾಸವಾಗಿದೆ.

ಗುತ್ತಿಗೆದಾರನಿಗೆ ಕುತ್ತು ತಂದ ಅಡ್ವಾನ್ಸ್ ಕಾಮಗಾರಿ!

ಈ ಕಾಮಗಾರಿಯನ್ನು ಅಡ್ವಾನ್ಸ್ ಆಗಿ ಮಾಡಲಾಗಿದೆ ಎಂದು ಪಂಚಾಯಿತಿ ಸದಸ್ಯರೊಬ್ಬರು ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿಲ್ ಪಾವತಿ ತಡೆಹಿಡಿಯಲಾಗಿತ್ತು.
ಆದರೆ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ತಮಗೆ ಆಪ್ತರಾದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುವುದು ಈ ಹಿಂದಿನ ಬಂದ ಸಂಪ್ರದಾಯ,ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಟೆಂಡರ್ ಗೆ ಅನುಮೋದನೆ ಪಡೆಯದೇ ಮುಂಚಿತ ಕಾಮಗಾರಿ ನಡೆಸಿ ಟೆಂಡರ್ ಹಾಕಿ ಕಾಮಗಾರಿ ಬಿಲ್ ಪಡೆದುಕೊಳ್ಳುವುದು ನಡೆದುಬಂದ ಪರಂಪರೆ.ಆದರೆ ಈ ಪದ್ದತಿ ನಿಯಮಬಾಹಿರ ಪ್ರಕ್ರಿಯೆಯಾಗಿದ್ದರೂ ಇಂದಿಗೂ ನಡೆದುಕೊಂಡು ಬಂದಿದೆ.
ಒಟ್ಟಿನಲ್ಲಿ ಈ ಪರವಿರೋಧ ಜಟಾಪಟಿಯಲ್ಲಿ ಸ್ಥಳೀಯರು ಮಾತ್ರ ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ.

 
 

 

 
 

 
 

 

 
 

Leave a Reply

Your email address will not be published. Required fields are marked *