Share this news

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಡಿಕೆ ಶಿವಕುಮಾರ್ 2013ರಿಂದ 2018ರ ವರೆಗೆ ಅಕ್ರಮ ಆಸ್ತಿಗಳಿಕೆ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಈ ಪ್ರಕರಣವನ್ನು ರದ್ದು ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಈ ಮಧ್ಯೆ ಮಧ್ಯಂತರ ತಡೆಯನ್ನು ರದ್ದು ಮಾಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳದ ಹಿನ್ನೆಲೆ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ರದ್ದು ಮಾಡುವಂತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.  ಡಿಕೆ ಶಿವಕುಮಾರ್ 2013 ರಿಂದ 2018ರ ವರೆಗೆ ಸುಮಾರು 75 ಕೋಟಿ ರೂಪಾಯಿ ಅಕ್ರಮ ಆಸ್ತಿಗಳಿಕೆ ಮಾಡಿದ್ದಾರೆ ಎಂದು ಎಫ್ಐಆರ್‌ನಲ್ಲಿ ಸಿಬಿಐ ಉಲ್ಲೇಖಿಸಿತ್ತು. 

ಕಳೆದ ಎರಡು ವರ್ಷಗಳಿಂದ ಸಿಬಿಐ ನಡೆಸಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ತನಿಖೆಗೆ ತಡೆ ನೀಡಿರುವುದು ಸುಪ್ರೀಂಕೋರ್ಟ್‌ನ ನಿಯಮಗಳಿಗೆ ವಿರುದ್ಧ ಎಂದು ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದ್ದು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ತಡೆ ಸಿಕ್ಕಿದ್ದರಿಂದ ಚುನಾವಣೆ ಹೊತ್ತಲ್ಲಿ ಡಿ.ಕೆ.ಶಿವಕುಮಾರ್‌ಗೆ ದೊಡ್ಡ ರಿಲೀಫ್ ಸಿಕ್ಕಿತ್ತು. 

ಆದರೆ ಈ ಮಧ್ಯೆ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಡಿ.ಕೆ.ಶಿವಕುಮಾರ್‌ಗೆ ಶಾಕ್ ಕೊಡಲು ಮುಂದಾಗಿದೆ.  2019ರಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಕ್ರಮವನ್ನೂ ಡಿ.ಕೆ.ಶಿವಕುಮಾರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಹೈಕೋರ್ಟ್ನ ಬೇಸಿಗೆ ಕಾಲದ ರಜೆ ಮುಕ್ತಾಯವಾದ ನಂತರ ಈ ಆದೇಶ ಹೊರಬೀಳುವ ಸಾಧ್ಯತೆಯಿದೆ.

 

Leave a Reply

Your email address will not be published. Required fields are marked *