ನಿತ್ಯ ಪಂಚಾಂಗ :
ದಿನಾಂಕ:01.01.2023 , ಭಾನುವಾರ,ಸಂವತ್ಸರ: ಶುಭಕೃತ್, ಉತ್ತರಾಯಣ, ಹೇಮಂತ ಋತು, ಮಾಸ: ಧನು, ಶುಕ್ಲಪಕ್ಷ, ನಕ್ಷತ್ರ:ಅಶ್ವಿನಿ,ರಾಹುಕಾಲ – 04:49 ರಿಂದ 06:14 ಗುಳಿಕಕಾಲ 03:24 ರಿಂದ 04:49 ಸೂರ್ಯೋದಯ (ಉಡುಪಿ) 06:56 ಸೂರ್ಯಾಸ್ತ – 06:13
ರಾಶಿ ಭವಿಷ್ಯ:
ಮೇಷ(Aries):ಹೊಸ ವರ್ಷದ ಮೊದಲ ದಿನ ನಿಮಗೆ ಎಲ್ಲ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ಯಾವುದೇ ಕೆಲಸ ಕೈಗೊಂಡರೂ ಅದರಲ್ಲಿ ಯಶಸ್ಸು ಗಳಿಸುತ್ತೀರಿ. ಉತ್ತಮ ಫಲಿತಾಂಶಕ್ಕಾಗಿ ಸಣ್ಣ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತೀರಿ. ವಿನಮ್ರ ನಡವಳಿಕೆಯಿಂದ ಸಮಾಜ ಹಾಗೂ ಕುಟುಂಬ ವರ್ಗದಲ್ಲಿ ಹೆಸರು ಗಳಿಸುತ್ತೀರಿ. ನಿಮಗೆ ಆತ್ಮೀಯರಾಗಿರುವ ವ್ಯಕ್ತಿಯೊಂದಿಗೆ ವೈಮನಸ್ಸು ಮೂಡಬಹುದು. ಶಾಂತಿಯಿಂದ ಬಗೆಹರಿಸಿಕೊಳ್ಳಿ. ಯಾರೊಂದಿಗೂ ನಿಮ್ಮ ಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಚರ್ಚೆ ನಡೆಸಬೇಡಿ. ಮನೆಯಲ್ಲಿ ನೆಮ್ಮದಿಯ ವಾತಾವರಣ.
ವೃಷಭ(Taurus):ಹಳೆಯ ತಪ್ಪುಗಳಿಂದ ಪಾಠ ಕಲಿಯುತ್ತೀರಿ. ಈ ದಿನ ನಿಮಗೆ ಪೂರಕವಾಗಿದ್ದು, ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರಲಿದ್ದೀರಿ. ವಿಶೇಷವಾದ ಕೆಲಸವನ್ನು ಪೂರ್ಣಗೊಳಿಸಲು ಸಂಪೂರ್ಣ ಗಮನ ಕೇಂದ್ರೀಕರಿಸುತ್ತೀರಿ ಹಾಗೂ ಅದರಲ್ಲಿ ಯಶಸ್ಸು ಕೂಡ ಗಳಿಸುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ಮನಸ್ಸಿನ ನೆಮ್ಮದಿ ಹೆಚ್ಚಲಿದೆ.
ಮಿಥುನ(Gemini):ಇಂದಿನ ನಿಮ್ಮ ವೇಳಾಪಟ್ಟಿ ಬ್ಯುಸಿ ಇರಲಿದೆ. ನಿಮ್ಮ ಕಾರ್ಯಶೈಲಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಈ ತನಕ ನೀವು ಏನು ಯೋಚಿಸಿದ್ದೀರೋ ಅದು ಕಾರ್ಯರೂಪಕ್ಕೆ ಬರಲಿದೆ. ಬಂಧುಗಳು ಹಾಗೂ ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತೀರಿ. ಯಾರೊಂದಿಗೂ ಅನಗತ್ಯ ಜಗಳಕ್ಕೆ ಮುಂದಾಗಬೇಡಿ. ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಿ.
ಕಟಕ(Cancer):ಅಪರಿಚಿತರ ಭೇಟಿಯಿಂದ ಹೊಸ ಹಾದಿಯೊಂದು ತೆರೆದುಕೊಳ್ಳಲಿದೆ. ಧಾರ್ಮಿಕ ಚಟುವಟಿಕೆ ಹಾಗೂ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳುತ್ತೀರಿ. ಇನ್ನೊಬ್ಬರಿಗೆ ಸಾಲ ನೀಡುವ ಮುನ್ನ ಯಾವಾಗ ಹಿಂತಿರುಗಿಸಬೇಕು ಎಂಬುದನ್ನು ನಿಶ್ಚಯಿಸಿಕೊಳ್ಳಿ. ಯಶಸ್ಸಿನ ಕುರಿತ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ. ನಿಮ್ಮ ಕೆಲಸವನ್ನು ಆಸಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಮಾಡಿ.
ಸಿಂಹ(Leo):ಸಮಯ ಇಂದು ನಿಮಗೆ ಸಾಥ್ ನೀಡಲಿದೆ. ಶುಭ ಸುದ್ದಿಯಿಂದ ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮ ಪ್ರಗತಿಗಾಗಿ ಕಳೆದ ಕೆಲವು ವರ್ಷಗಳಿಂದ ಕೈಗೊಂಡ ನಿರ್ಧಾರಗಳಿಂದ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ಇನ್ನೊಬ್ಬರ ನೋವು ಹಾಗೂ ಸಂಕಟದಲ್ಲಿ ಭಾಗಿಯಾಗುತ್ತೀರಿ. ಇದರಿಂದ ನಿಮ್ಮ ಮನಸ್ಸಿಗೆ ಕೂಡ ನೆಮ್ಮದಿ ಲಭಿಸುತ್ತದೆ. ಸಮಾಜ ಹಾಗೂ ಕುಟುಂದಲ್ಲಿ ನಿಮ್ಮ ಬಗ್ಗೆ ಸದಾಭಿಪ್ರಾಯ ಮೂಡುತ್ತದೆ.
ಕನ್ಯಾ(Virgo):ಆಪ್ತರ ಭೇಟಿಯಿಂದ ಮನೆಯಲ್ಲಿ ಸಂತಸದ ವಾತಾವರಣ. ಸಾರ್ವಜನಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳಿ. ಇದರಿಂದ ಭವಿಷ್ಯದಲ್ಲಿ ನಿಮ್ಮ ಗುರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಇಂದು ಅನಿರೀಕ್ಷಿತ ಯಶಸ್ಸು ಸಿಗಲಿದೆ. ಸಮೀಪದ ಧಾರ್ಮಿಕ ಮಂದಿರಕ್ಕೆ ಭೇಟಿ ನೀಡುತ್ತೀರಿ. ಇನ್ನೊಬ್ಬರ ಕಷ್ಟಕ್ಕೆ ನೆರವು ನೀಡುತ್ತೀರಿ.
ತುಲಾ(Libra):ಕುಟುಂಬ ಹಾಗೂ ವೃತ್ತಿ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುತ್ತೀರಿ. ಇದರಿಂದ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಕುಟುಂಬದ ಯಾವುದೇ ವಿಚಾರದ ಕುರಿತಾದ ಚರ್ಚೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅಗತ್ಯ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸೋದು ಅಗತ್ಯ. ನಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಂದ ದೂರವಿರಿ.
ವೃಶ್ಚಿಕ(Scorpio):ನಿಮ್ಮ ಶಾಂತ ಸ್ವಭಾವ ಇತರರಿಗೆ ಉತ್ತಮ ನಿದರ್ಶನವಾಗಲಿದೆ. ಮನೆ ಹಾಗೂ ಉದ್ಯಮದ ನಡುವೆ ಉತ್ತಮ ಸಮತೋಲನ ನಿರ್ವಹಣೆ ಮಾಡಿ. ಕೆಲಸ ಹೆಚ್ಚಿದ್ದರೂ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ. ಅಧ್ಯಯನಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಸಮಸ್ಯೆ. ಸಾಮಾಜಿಕ ಹಾಗೂ ರಾಜಕೀಯ ಕೆಲಸಗಳಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ.
ಧನುಸ್ಸು(Sagittarius): ಸ್ಥಳ ಬದಲಾವಣೆ ಯೋಜನೆ ಕಾರ್ಯಗತಕ್ಕೆ ಇದು ಸೂಕ್ತ ಸಮಯ. ನಿಮ್ಮ ವ್ಯಕ್ತಿತ್ವ ಹಾಗೂ ಆಕರ್ಷಕ ಮಾತಿನ ಪ್ರಭಾವದಿಂದ ಸಾಮಾಜಿಕ ಹಾಗೂ ಕುಟುಂಬ ವಲಯದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ಇನ್ನೊಬ್ಬರ ಜೊತೆಗಿನ ವೈಮನಸ್ಸನ್ನು ಕೋಪದ ಬದಲಿಗೆ ಅರ್ಥಮಾಡಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಿ. ಆರೋಗ್ಯ ಉತ್ತಮವಾಗಿರಲಿದೆ.
ಮಕರ(Capricorn):ಸಮಸ್ಯೆಯನ್ನು ಸಮರ್ಪಕವಾಗಿ ಪರಿಹರಿಸಿಕೊಳ್ಳಿ. ಇಂದಿನ ದಿನ ಉತ್ತಮವಾಗಿರಲಿದೆ. ಮಕ್ಕಳ ಭವಿಷ್ಯದ ಕುರಿತ ಕೆಲವು ಯೋಜನೆಗಳು ಕೂಡ ಫಲ ನೀಡಲಿವೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಅನುಭವಿ ವ್ಯಕ್ತಿಗಳೊಂದಿಗೆ ಚರ್ಚಿಸಿ ಅವರ ಸಲಹೆ ಪಡೆಯಿರಿ. ಅಧಿಕ ಒತ್ತಡದಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.
ಕುಂಭ(Aquarius):ಪರಿಸ್ಥಿತಿ ಸುಧಾರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ನಿಮ್ಮ ಆರ್ಥಿಕ ಯೋಜನೆಗಳ ಮೇಲೆ ನಂಬಿಕೆಯಿಟ್ಟು ಕಾರ್ಯನಿರ್ವಹಿಸಿ. ನಿಮ್ಮೊಳಗಿನ ಎಲ್ಲ ನಕಾರಾತ್ಮಕ ಭಾವನೆಗಳನ್ನು ತೆಗೆದು ಹಾಕುವ ರೆಸಲ್ಯೂಷನ್ ಮಾಡಿ. ಪ್ರಾಯೋಗಿಕ ಅನುಭವದಿಂದ ಯಾವುದೇ ಕಷ್ಟದ ಕೆಲಸವಾದರೂ ಅದನ್ನು ಪೂರ್ಣಗೊಳಿಸುತ್ತೀರಿ. ಯಾವುದೇ ಯೋಜನೆ ಪ್ರಾರಂಭಿಸುವ ಮುನ್ನ ಅದರ ಬಗ್ಗೆ ಯೋಚಿಸಿ.
ಮೀನ(Pisces):ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಹಣಕಾಸಿನ ಯೋಜನೆಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಮನೆ ನಿರ್ವಹಣೆಗೆ ಸಂಬಂಧಿಸಿದ ಕೆಲಸ-ಕಾರ್ಯಗಳಲ್ಲಿ ನಿಮಗೆ ವಿಶೇಷ ಬೆಂಬಲ ಸಿಗಲಿದೆ. ಮನೆ ಹಾಗೂ ಸಮಾಜದಲ್ಲಿ ನಿಮ್ಮ ವಿಶೇಷ ಯಶಸ್ಸಿನ ಸಂಭ್ರಮಾಚರಣೆ ನಡೆಸಲಿದ್ದೀರಿ.