ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರ್ಯಕರ್ತರ ಶ್ರಮದ ಫಲವೇ ಹೊರತು ಯಾವುದೇ ವ್ಯಕ್ತಿಯ ಶ್ರಮವಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೇವಲ ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ನಾನು ಯಾವತ್ತೂ ಹೇಳಿಲ್ಲ, ಆದರೆ ಕೆಲವರು ಈ ಕುರಿತು ಗೊಂದಲದ ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಿದ್ದಾರೆ, ಕಾರ್ಯಕರ್ತರು ಮತ್ತು ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಗೆಲುವಿನ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಡಿಕೆ ಶಿವಕುಮಾರ್, ಪಕ್ಷದ ಕಾರ್ಯಕರ್ತರು, ರಾಜ್ಯದ ಜನತೆ, ಪ್ರತಿ ಹಳ್ಳಿಯ ಜನರು ಹೋರಾಟ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಶಿವಕುಮಾರ್ ಒಬ್ಬರೇ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು ಎಂದು ನಾನು ಎಂದಿಗೂ ಹೇಳುವುದಿಲ್ಲ ಎಂದರು.
ಎರಡೂವರೆ ವರ್ಷಗಳ ನಂತರ ಸಂಭಾವ್ಯ ಸಚಿವ ಸಂಪುಟ ಪುನಾರಚನೆ ಕುರಿತು ಸರ್ಕಾರದ ಮುಖ್ಯಸಚೇತಕ ಅಶೋಕ್ ಪಟ್ಟಣ ಅವರ ಉದ್ದೇಶಿತ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್,ಕೆಲವು ವಿಚಾರಗಳು ಪಕ್ಷದ ಆಂತರಿಕವಾಗಿ ಚರ್ಚೆಯಾಗುತ್ತವೆ. ಅದನ್ನು ನಾನು ಬಹಿರಂಗವಾಗಿ ಹೇಳಲಾರೆ. ನಾನು ಅದನ್ನು ಚರ್ಚಿಸಲು ಹೋಗುವುದಿಲ್ಲ. ಆದರೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದರು.