Share this news

ಕಾರ್ಕಳ : ಪರಶುರಾಮ ಥೀಮ್ ಪಾರ್ಕಿಗೆ ಜಮೀನು ಮಂಜೂರಾತಿಯಾಗದಿದ್ದರೂ ಈ ಯೋಜನೆಯನ್ನು ಅನುಷ್ಠಾಪ ಮಾಡಲಾಗಿದೆ. ಇದೀಗ ಪ್ರತಿಮೆಯ ನೈಜತೆಯ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿದ್ದು ಈ ಯೋಜನೆಯ ವಿಚಾರದಲ್ಲಿ ಸ್ಪಷ್ಟತೆಯೇ ಇಲ್ಲದೇ ಕಾಂಗ್ರೆಸ್ ಪಕ್ಷ ಮೇಲೆ ಬಿಜೆಪಿ ಗೂಬೆಕೂರಿಸುವ ಕೆಲಸ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆರೋಪಿಸಿದರು
ಅವರು ಗುರುವಾರ ಕಾರ್ಕಳ ಬೈಲೂರಿನ ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಥೀಮ್ ಪಾರ್ಕಿನ ವಿವಾದಿತ ಪರಶುರಾಮಮೂರ್ತಿಯ ಪರಿಶೀಲನೆ ನಡೆಸಿ ಮಾತನಾಡಿದರು.
ಪರಶುರಾಮ ಮೂರ್ತಿಯ ನೈಜತೆ ಕುರಿತ ವಿವಾದದ ಕುರಿತು ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ವಾರ ಮುಖ್ಯಮಂತ್ರಿ ಜಿಲ್ಲೆಗೆ ಅಗಮಿಸಲಿದ್ದು ಅದರ ಮೊದಲು ಸತ್ಯಾಸತ್ಯತೆ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ ಎಂದರು.
ಈಗಾಗಲೇ  ಸರಕಾರದಿಂದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಗೆ 6.5 ಕೋಟಿ ರೂ. ಸರಕಾರದಿಂದ ಬಿಡುಗಡೆ ಮಾಡಿದ್ದು ಉಳಿದ ಮೊತ್ತವನ್ನು ಬಿಡುಗಡೆಗೊಳಿಸುವಂತೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ಮನವಿ ಮಾಡಿದರು. ಅವರ ಮನವಿಗೆ ಪ್ರತಿಕ್ರಿಯಿಸಿದ ಮಂಜುನಾಥ ಭಂಡಾರಿ,  ನಿರ್ಮಿತಿ ಕೇಂದ್ರದ  ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಯವರೇ ಕಾಮಗಾರಿ ಸ್ಥಗಿತಗೊಳಿಸುವಂತೆ ಹೇಳಿದ್ದಾರೆ. ಥೀಮ್ ಪಾರ್ಕ್ ಕಾಮಗಾರಿ ಮುಗಿಸಿ ಬಿಟ್ಟುಕೊಡಲಾಗಿದೆ ಎಂಬ ಪೂರಕ ದಾಖಲೆಗಳನ್ನು ನೀಡಲಿ, ಬಳಿಕ ಸರಕಾರದ ಕಡೆಯಿಂದ ಬೇಕಾದ ಅಗತ್ಯ ನೆರವು ನೀಡಲಾಗುವುದು ಎಂದರು.
ಈ ಯೋಜನೆಯ ವಿಚಾರದಲ್ಲಿ ನಮ್ಮ ಆಕ್ಷೇಪವಿಲ್ಲ, ನಮ್ಮ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ  ಎಂದು ಭಂಡಾರಿ ಸ್ಪಷ್ಟಪಡಿಸಿದರು.
ಇದೇವೇಳೆ ಕಾಂಗ್ರೆಸ್ ಕಾರ್ಯಕರ್ತರು ಪರಶುರಾಮನ ಪ್ರತಿಮೆಯನ್ನು ಗ್ಲಾಸ್ ಫೈಬರ್ ನಿಂದ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮೂರ್ತಿಯ ಕೆಲವು ತುಣುಕುಗಳನ್ನು ಪ್ರದರ್ಶಿಸಿದರು.ನಕಲಿ ಪ್ರತಿಮೆ ಪ್ರತಿಷ್ಠಾಪಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೇ ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಕಾರ್ಯಕರ್ತರಾದ ಸುಭೀತ್ ಎನ್ ಆರ್, ಸುಧಾಕರ ಶೆಟ್ಟಿ, ವೀವೇಕಾನಂದ ಶೆಣೈ, ಸಂದೀಪ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 

 

 

 

 

 

 

 

Leave a Reply

Your email address will not be published. Required fields are marked *