ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಕಾಮಗಾರಿ ಪೂರ್ಣಗೊಳಿಸುವ ಉದ್ಧೇಶದಿಂದ ನವೆಂಬರ್ ಅಂತ್ಯದವರೆಗೆ ಅಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಾಹಶೀಲ್ದಾರರ ಕ್ರಮವನ್ನು ಸ್ವಾಗತಿಸುತ್ತೇವೆ, ಆದರೆ ಯಾವೆಲ್ಲಾ ಕಾಮಾಗಾರಿಗಳು ಬಾಕಿ ಉಳಿದಿವೆ, ಪ್ರಸ್ತುತ ಯಾವ ಕಾಮಗಾರಿಯನ್ನು ಕೈಗೊಳ್ಳುತ್ತೀರಿ ಎಂದು ಅವರು ಸ್ಪಷ್ಟಪಡಿಸಬೇಕು ಎಂದು ಪುರಸಭಾ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಆಗ್ರಹಿಸಿದ್ದಾರೆ
ಥೀಮ್ ಪಾರ್ಕಿನಲ್ಲಿ ಸ್ಥಾಪಿಸಿದ್ದ ಪರಶುರಾಮನ ಪ್ರತಿಮೆಯ ಬಗ್ಗೆ ಹಲವಾರು ಗೊಂದಲಗಳಿದ್ದು ಉಡುಪಿ ಉಸ್ತುವಾರಿ ಸಚಿವರ ಬೇಟಿಯಿಂದ ಅದು ನಿವಾರಣೆಯಾಗಿದೆ.ಅವರ ಸಮ್ಮುಖದಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಿಂದ ಪ್ರತಿಮೆ ಸಂಪೂರ್ಣ ಕಂಚಿನದಲ್ಲ ಎಂದು ಸ್ಪಷ್ಟವಾಗಿದೆ. ಆದರೆ ನಿರ್ಮಿತಿ ಕೇಂದ್ರದವರು ನೀಡುತ್ತಿದ್ದ ಕೆಲವು ವ್ಯತಿರಿಕ್ತ ಹೇಳಿಕೆಗಳಿಂದ ಇನ್ನೂ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಹಾಗಾಗಿ ಬಾಕಿ ಇರುವ ಮತ್ತು ಇನ್ನು ಕೈಗೊಳ್ಳುವ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಆ ಜವಾಬ್ದಾರಿ ತಹಶೀಲ್ದಾರರು ಮತ್ತು ನಿರ್ಮಿತಿ ಕೇಂದ್ರದಾಗಿರುತ್ತದೆ.ಹಾಗಾಗಿ ಈ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಒತ್ತಾಯಿಸಿದ್ದಾರೆ