ನವದೆಹಲಿ: ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಇಂದು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿದೆ ಎಂದು ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ 14.2 ಕಿಲೋ ಎಲ್ಪಿಜಿ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ 200 ರೂನಷ್ಟು ಇಳಿಕೆ ಮಾಡಿತ್ತು. ಎಲ್ಲಾ ಎಲ್ಪಿಜಿ ಬಳಕೆದಾರರಿಗೂ ಇದು ಅನ್ವಯ ಆಗುತ್ತದೆ. ಬೆಂಗಳೂರಿನಲ್ಲಿ 1,105.50 ರೂ ಇದ್ದ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 905.59 ರು. ಗೆ ಇಳಿದಿದೆ. ಆದರೆ, ಪಿಎಂ ಉಜ್ವಲ ಯೋಜನೆ ಹೊಂದಿರುವವರಿಗೆ ಸರ್ಕಾರ ಈ ಹಿಂದೆಯೇ 200 ರೂನಷ್ಟು ಸಬ್ಸಿಡಿ ಕೊಟ್ಟಿದೆ. ಈಗ ಮತ್ತಷ್ಟು 100 ರೂ ಸಬ್ಸಿಡಿ ಒದಗಿಸುತ್ತದೆ. ಅಲ್ಲಿಗೆ ಈ ಯೋಜನೆಯ ಫಲಾನುಭವಿಗಳಿಗೆ ಒಟ್ಟು 300 ರೂ ಸಬ್ಸಿಡಿ ಸಿಗುತ್ತದೆ.