ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಕುಮ್ಮಕ್ಕಿನಿಂದ ಅವರ ಕಾರ್ಯಕರ್ತರು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಕಾರ್ಕಳ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿಯವರ ಅನುಯಾಯಿಗಳು, ಅವರ ಕುಮ್ಮಕ್ಕಿನಿಂದ ಪರಸ್ಪರ ದ್ವೇಷ ಭಾವನೆ, ವೈಯುಕ್ತಿಕ ತೇಜೋವಧೆ, ಪೂರ್ವಾಗ್ರಹಪೀಡಿತ ನಿಂದನೆಗಳಲ್ಲಿ ತೊಡಗಿದ್ದಾರೆ. ಬಿಜೆಪಿ ಕಾರ್ಯಕರ್ತ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿಯವರ ಬಗ್ಗೆ ಖಾಸಗಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಯವರು ಮುದ್ರಿತ ವಿಡಿಯೋ ರೆಕಾರ್ಡ್ನ್ನು ಹರಿಯಬಿಟ್ಟಿದ್ದು, ವಿಡಿಯೋದಲ್ಲಿ ರಾಕೇಶ್ ಶೆಟ್ಟಿಯವರು ವಿಖ್ಯಾತ್ ಶೆಟ್ಟಿಯವರ ಬಗ್ಗೆ ನಿಂದನಾತ್ಮಕ ಹಾಗೂ ವೈಯುಕ್ತಕ ತೇಜೋವಧೆ ಮಾಡಿ ಏಕವಚನದಲ್ಲಿ ಮಾತನಾಡಿದ್ದಾರೆ.
ಅವರು ತಮ್ಮ ವೀಡಿಯೋದಲ್ಲಿ ವಿಖ್ಯಾತ್ ಶೆಟ್ಟಿ ಹಾಗೂ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರ ವಿರುದ್ಧ ತುಳುವಿನಲ್ಲಿ ಅವಾಚ್ಯ ಪದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಅಲ್ಲದೇ ಪವರ್ ಟಿ.ವಿ.ಯ ಯೂಟ್ಯೂಬ್ ಪ್ರೋಮೋದಲ್ಲಿ ಬಿಜೆಪಿ ನಾಯಕರಿಗೆ ಮುಜುಗರ ತಂದ ವಿಡೀಯೋ ಪ್ರಕರಣ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಬೆಂಬಲಿಗನ ವೀಡಿಯೋ, ಶಾಸಕರ ಬೆಂಬಲಿಗನ ರಾಸಲೀಲೆ ಎಂದೆಲ್ಲಾ ಸುಳ್ಳುಸುದ್ದಿ ಹಬ್ಬಿಸಿ, ಎಲ್ಲೆಡೆ ಚರ್ಚೆ,ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್,ರಾಸಲೀಲೆ ವಿಡಿಯೋ ವಿಷಯದಿಂದ ಯೋಗಿಗೆ ಭಾರಿ ಮುಜುಗರ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಹರಡುತ್ತಿದ್ದಾರೆ. ಇದರಿಂದ ಬಿಜೆಪಿ ಕಾರ್ಯಕರ್ತನ ತೇಜೋವಧೆ ಆಗಿರುವುದು ಮಾತ್ರವಲ್ಲದೇ ಕ್ಷೇತ್ರದ ಮಹಿಳೆಯರಿಗೂ ಅಪಮಾನ ಮಾಡಿದಂತಾಗಿದೆ.
ವಯುಕ್ತಿಕ ತೇಜೋವಧೆಯ ಮೂಲಕ ಪರಸ್ಪರ ದ್ವೇಷ ಭಾವ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ಕಣವನ್ನು ದ್ವೇಷಪೂರಿತವನ್ನಾಗಿಸುತ್ತಿದ್ದಾರೆ. ಈ ಎಲ್ಲಾ ಅಪಪ್ರಚಾರದ ಹಿಂದೆ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿಯವರ ಕುಮ್ಮಕ್ಕು ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ರೀತಿಯ ಸುದ್ದಿ ಪ್ರಸಾರ ಮಾಡಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.