ಕಾರ್ಕಳ: ಪರಶುರಾಮ ಥೀಮ್ ಪಾರ್ಕಿನ ಕುರಿತು ಕಾಂಗ್ರೆಸ್ ನಾಯಕರು ವಿನಾಕಾರಣ ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಪರಶುರಾಮ ಪ್ರತಿಮೆಯ ಕುರಿತು ಕಾಂಗ್ರೆಸ್ ನಾಯಕರಿಗೆ ಅನುಮಾನಗಳಿದ್ದರೆ, ಕಳೆದ 5 ತಿಂಗಳಿನಿಂದ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ ನಿಮಗೆ ತನಿಖೆ ಮಾಡಲು ಅಡ್ಡಿಪಡಿಸಿದವರು ಯಾರು? ತನಿಖೆಗೆ ಮುಕ್ತ ಅವಕಾಶವಿದೆ ಎಂದು ಶಾಸಕ ಸುನಿಲ್ ಕುಮಾರ್ ಸವಾಲು ಹಾಕಿದರು
ಅವರು ಶನಿವಾರ ವಿಕಾಸ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪರಶುರಾಮ ಥೀಮ್ ಪಾರ್ಕಿನ ವಿಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ದ್ವಂದ್ವ ನಿಲುವಿನ ಹಿನ್ನಲೆಯಲ್ಲಿ ವಿನಾಕಾರಣ ಗೊಂದಲ ಮೂಡಿಸಿ ಕಾಮಗಾರಿ ಸ್ಥಗಿತಗೊಳಿಸಿ ಈ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಕುರಿತು ತನಿಖೆಗೆ ಸಿದ್ದರಿಲ್ಲ,ಬಾಕಿ ಉಳಿದ ಅನುದಾನ ಬಿಡುಗಡೆಗೆ ತಯಾರಿಲ್ಲ,ಅಪಪ್ರಚಾರ ನಿಲ್ಲಿಸಲು ಕಾಂಗ್ರೆಸ್ ನಾಯಕರು ಸಿದ್ದರಿಲ್ಲ ಎಂದಾದರೆ ಕಾಂಗ್ರೆಸ್ ನ ಉದ್ದೇಶ ಈ ಯೋಜನೆಯನ್ನು ವಿರೋಧಿಸುವುದೇ ಆಗಿದೆ ಎಂದರು.
ಕಾರ್ಕಳವನ್ನು ಪ್ರೀತಿಸುವವರು ಕ್ಷೇತ್ರದ ಅಭಿವೃದ್ದಿ ಮಾಡುತ್ತಾರೆ, ಕಾರ್ಕಳವನ್ನು ದ್ವೇಷಿಸುವವರು ಕಾರ್ಕಳದ ಕುರಿತು ಅಪಪ್ರಚಾರ ಮಾಡುವ ಮೂಲಕ ಅಭಿವೃದ್ಧಿಯನ್ನು ದ್ವೇಷಿಸುತ್ತಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಮ್ಯುನಿಸ್ಟರು, ಎಡಪಂಥೀಯರು,ನಗರ ನಕ್ಸಲರು, ಅನ್ಯಮತೀಯರು ಬಿಜೆಪಿಯ ರಾಷ್ಟ್ರೀಯ ಸಿದ್ದಾಂತಗಳ ಮೇಲೆ ಸಂಘಟಿತರಾಗಿ ದಾಳಿ ನಡೆಸುತ್ತಿದ್ದಾರೆ.ಇದಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಎದೆಗುಂದುವ ಪ್ರಶ್ನೆಯೇ ಇಲ್ಲವೆಂದರು.
ನಿಮಗೆ ಮೂರ್ತಿಯ ಬಗ್ಗೆ ಅನುಮಾನಗಳಿದ್ದರೆ ಯಾಕೆ ತನಿಖೆ ಮಾಡಿಲ್ಲ,ಗುಣಮಟ್ಟದಲ್ಲಿ ಹಾಗೂ ಮೂರ್ತಿಯಲ್ಲಿ ವ್ಯತ್ಯಾಸಗಳಿದ್ದರೆ ತನಿಖೆ ಮಾಡಿ, ಅನುದಾನ ಬಿಡುಗಡೆಗೆ ಸಿದ್ದರಿಲ್ಲ, ಅಪಪ್ರಚಾರ ನಿಲ್ಲಿಸಲು ಸಿದ್ದರಿಲ್ಲ, ಈ ಯೋಜನೆಗೆ 16.50 ಕೋಟಿ ರೂಪಾಯಿ ಬಿಡುಗಡೆಯಾಗಿದೆ, ಉದಯ ಶೆಟ್ಟಿಯವರಿಗೆ ಬದ್ದತೆಯಿದ್ದರೆ ಕಾರ್ಕಳದ ಅಭಿವೃದ್ಧಿ ಬಗ್ಗೆ ಅಭಿಮಾನವಿದ್ದರೆ ಬಾಕಿ ಅನುದಾನ ಬಿಡುಗಡೆ ಮಾಡಿ ಎಂದು ಶಾಸಕ ಸುನಿಲ್ ಕುಮಾರ್ ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರಕ್ಕೆ 5 ಆಗ್ರಹಗಳು
* ತಡೆಹಿಡಿದ ಅನುದಾನ ತಕ್ಷಣವೇ ಬಿಡುಗಡೆ ಮಾಡಿ
* ಕಾಮಗಾರಿಯ ಕುರಿತು ಅನುಮಾನಗಳಿದ್ದಲ್ಲಿ ತನಿಖೆ ನಡೆಸಿ
* ಸ್ಥಗಿತಗೊಂಡ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಿ
* ಶೀಘ್ರವೇ ಈ ತಾಣವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿ
* ಸುಳ್ಳು ಆರೋಪಗಳನ್ನು ಮಾಡುವವರ ವಿರುದ್ದ ಕ್ರಮಕೈಗೊಳ್ಳಿ ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.
ಒಂದುವೇಳೆ ಸರ್ಕಾರ ಹಣ ಬಿಡುಗಡೆ ಮಾಡಲು ಸಿದ್ದರಿರದಿದ್ದಲ್ಲಿ ನಾನು ಜನರಲ್ಲಿ ಭಿಕ್ಷೆ ಬೇಡಿ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಗಿಸುತ್ತೇನೆ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಣಿರಾಜ ಶೆಟ್ಟಿ ಮಾತನಾಡಿ, ಪರಶುರಾಮ ಥೀಮ್ ಪಾರ್ಕಿನ ಕುರಿತು ಕಾಂಗ್ರೆಸ್ ಪಕ್ಷದಿಂದ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಹಾಕಿದ ಕೆಸರು ಕಲ್ಲು ಕೆಸರಿನಲ್ಲಿ ಮುಳುಗಿಹೋಗಿದೆ,
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಕಿತ್ತಾಟ ತಾರಕಕ್ಕೆ ಏರಿದೆ.ಸುನಿಲ್ ಕುಮಾರ್ ಪ್ರಭಾವ ಕುಗ್ಗಿಸಲು ವಿನಾಕಾರಣ ಪಿತೂರಿ ನಡೆಸಲಾಗುತ್ತಿದೆ ಎಂದರು.
ಸುನಿಲ್ ಕುಮಾರ್ ಸಚಿವರಾದ ಬಳಿಕ ಅಭಿವೃದ್ದಿಯಲ್ಲಿ ರಾಜ್ಯದಲ್ಲಿ ಕಾರ್ಕಳ ಕ್ಷೇತ್ರ ನಂಬರ್ ವನ್ ಕ್ಷೇತ್ರವಾಗಿದೆ.
ಕಾಂಗ್ರೆಸ್ ಪಕ್ಷದ ಬಿ ಟೀಮ್ ಎನ್ನಿಸಿಕೊಂಡಿದ್ದ ಮುತಾಲಿಕ್ ಅವರು ಬಿಜೆಪಿ ವಿರುದ್ಧ ಸುಳ್ಳು ಭ್ರಷ್ಟಾಚಾರದ ಆರೋಪ, ವೈಯುಕ್ತಿಕ ತೇಜೋವಧೆ ಮಾಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ,ಒಬ್ಬ ಗುತ್ತಿಗೆದಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಲೋಕಸಭಾ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಪರಶುರಾಮ ಮೂರ್ತಿಯ ಪ್ರತಿಮೆಯ ಕುರಿತು ಸುಳ್ಳು ಆರೋಪ ಹೊರಿಸಿ ಈ ಪ್ರಕರಣವನ್ನು ಜೀವಂತವಾಗಿರಿಸಿ ಗೆಲ್ಲುವ ಪ್ರಯತ್ನ
ಕಾಂಗ್ರೆಸ್ ನಡೆಸುತ್ತಿದೆ, ಬಿಜೆಪಿಯ ವಿರುದ್ದ ಇಂತಹ ಕೀಳುಮಟ್ಟದ ವರ್ತನೆ ತೋರಿದ್ದಲ್ಲಿ ಬಿಜೆಪಿ ಕಾರ್ಯಕರ್ತರು ಅದಕ್ಕಿಂತಲೂ ಕೀಳುಮಟ್ಟದ ವರ್ತನೆ ಮಾಡಬೇಕಾಗುತ್ತದೆ ಎಂದು ಮಹಾವೀರ ಹೆಗ್ಡೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬೋಳ ಜಯರಾಮ ಸಾಲ್ಯಾನ್,ರವೀಂದ್ರ ಮಡಿವಾಳ, ಸುಧೀರ್, ರೇಷ್ಮಾ ಶೆಟ್ಟಿ, ಸವೀತಾ ಕೋಟ್ಯಾನ್ ಉಪಸ್ಥಿತರಿದ್ದರು




