ಕಾರ್ಕಳ:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಈಗಾಗಲೇ ಟಿಕೆಟ್ ಆಕಾಂಕ್ಷಿಗಳ ಹೊರತುಪಡಿಸಿ ಅನ್ಯ ಅಭ್ಯರ್ಥಿಯು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲವೆಂದು ಕಾಂಗ್ರೆಸ್ ನಾಯಕರು ಕಾರ್ಕಳದಲ್ಲಿ ನಡೆದ ಜಂಟೀ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಬಿಜೆಪಿ ವಿನಾ ಕಾರಣ ಗೊಂದಲ ಮೂಡಿಸುತ್ತಿದೆ ಆದರೆ ಈ ಬಾರಿ ಬಿಜೆಪಿಯ ಅಪಪ್ರಚಾರ ನಡೆಯುವುದಿಲ್ಲ ನಮ್ಮ ಸಾಂಘಿಕ ಪ್ರಯತ್ನ ಹಾಗೂ ಜನಪರ ಯೋಜನೆಗಳಿಂದ ಕಾಂಗ್ರೆಸ್ ಗೆಲ್ಲುವುದು ಶತಃಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ,ಕಾರ್ಕಳ ಬಿಜೆಪಿ ಸೋಲಿನ ಭಯದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಸುತ್ತಿದೆ, ಬಿಜೆಪಿಯಲ್ಲಿದ್ದುಕೊಂಡು ಕೆಲವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ ಆದರೆ ರಾಜ್ಯದ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಹಾಗೂ ವೀರಪ್ಪ ಮೊಯ್ಲಿಯವರು ಅಂತಿಮಗೊಳಿಸುತ್ತಾರೆ. ಕಾರ್ಕಳದ ಕಾರ್ಯಕರ್ತರ ಹಾಗೂ ನಾಯಕರ ಅಭಿಪ್ರಾಯ ಸಂಗ್ರಹಿಸಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಟಿಕೆಟ್ ಆಕಾಂಕ್ಷಿ ಹಾಗೂ ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿ ಹಾಗೂ ಡಿಆರ್ ರಾಜು ಮಾತನಾಡಿ, ಕಾರ್ಕಳದಲ್ಲಿ ನಾಲ್ಕು ಜನ ಆಕಾಂಕ್ಷಿಗಳು ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ, ಇವರನ್ನು ಹೊರತುಪಡಿಸಿ ಇತರ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಶ್ನೆಯೇ ಇಲ್ಲವೆಂದು ಕೆಪಿಸಿಸಿ ರಾಜ್ಯ ನಾಯಕರು ಹಾಗೂ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಅಭ್ಯರ್ಥಿಯ ಹೆಸರು ಪ್ರಸ್ತಾಪವಾಗಿದ್ದು ಇದು ಸತ್ಯಕ್ಕೆ ದೂರವಾಗಿದೆ,ನಮ್ಮಲ್ಲಿ ಯಾರೇ ಸ್ಪರ್ಧಿಯಾಗಿ ಆಯ್ಕೆಯಾದರೂ ನಾವು ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಬದ್ದರಾಗಿದ್ದೇವೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ನಾವು ನಾಲ್ಕು ಮಂದಿ ಅಭ್ಯರ್ಥಿಗಳು ವೀರಪ್ಪ ಮೊಯ್ಲಿ ಹಾಗೂ ಗೋಪಾಲ ಭಂಡಾರಿಯವರ ಶಿಷ್ಯರಾಗಿದ್ದವರು ಹಾಗಾಗಿ ಪಕ್ಷ ಸಂಘಟನೆಗೆ ಒತ್ತುಕೊಟ್ಟು ಚುನಾವಣೆ ಎದುರಿಸಲಿದ್ದೇವೆ.ಕಾಂಗ್ರೇಸ್ ಪಕ್ಷ ಜನರಿಗೆ ಮೂಲಸೌಕರ್ಯಗಳನ್ನು ಹಾಗೂ ಬದುಕನ್ನು ಕಟ್ಟಿಕೊಟ್ಟ ಪಕ್ಷವಾಗಿದೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಮುಂದಿನ ಚುನಾವಣೆಯನ್ನು ಗೆಲ್ಲುವುದೇ ನಮ್ಮೆಲ್ಲರ ಗುರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ ,ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಶುಭದ್ ರಾವ್ ಉಪಸ್ಥಿತರಿದ್ದರು