ಕಾರ್ಕಳ: ಕೇವಲ ಬಿಟ್ಟಿ ಪ್ರಚಾರದ ಉದ್ದೇಶದಿಂದ ಕಾಂಗ್ರೆಸ್ ಪುರಸಭಾ ಸದಸ್ಯ ಶುಭದ್ ರಾವ್ ಕಾರ್ಕಳ ಬಿಜೆಪಿ ಪುರಸಭಾ ಸದಸ್ಯರ ವಿರುದ್ಧ ಹಣ ಪಡೆದ ಸುಳ್ಳು ಆರೋಪ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಯವರಿಂದ ಬಿಜೆಪಿ ಸದಸ್ಯರು ಹಣ ಪಡೆದಿದ್ದಾರೆ ಎಂದು ಶುಭದ್ ರಾವ್ ಸಾಬೀತುಪಡಿಸಬೇಕು ಇಲ್ಲವಾದರೆ ಬಿಜೆಪಿ ಯ ಎಲ್ಲಾ 11 ಸದಸ್ಯರ ಮೇಲೆ ಕೆಟ್ಟ ಹೆಸರು ಬರುತ್ತದೆ,ಆದ್ದರಿಂದ ಸುಳ್ಳು ಆರೋಪ ಹೊರಿಸಿದ ಶುಭದ್ ರಾವ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯ್ಲಿ ಎಚ್ಚರಿಸಿದ್ದಾರೆ.

ಅವರು ಬುಧವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಬಿಜೆಪಿ ಸದಸ್ಯರು ಶಿಕ್ಷಣ ಸಂಸ್ಥೆಯಿಂದ ಹಣ ಪಡೆದಿದ್ದಾರೆ ಎಂದು ಶಿಕ್ಷಣ ಸಂಸ್ಥೆಯವರು ಎಲ್ಲಿಯೂ ಹೇಳಿಕೆ ನೀಡಿಲ್ಲ,ಅಲ್ಲದೇ ಈ ಕುರಿತು ಶುಭದ್ ರಾವ್ ಅವರಲ್ಲಿ ದಾಖಲೆಯಿದ್ದರೆ ಪುರಸಭೆ ಆಡಳಿತಾಧಿಕಾರಿಗೆ ಅಥವಾ ಜಿಲ್ಲಾಧಿಕಾರಿಗಳಿಗೆ ದೂರು ನೀಡಬಹುದಿತ್ತು. ಅಲ್ಲಿಯೂ ನ್ಯಾಯ ಸಿಗದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುವುದು ಬಿಟ್ಟು ಕೇವಲ ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದು ರವೀಂದ್ರ ಮೊಯ್ಲಿ ಕಿಡಿಕಾರಿದರು.

ಈ ಹಿಂದೆಯೂ ಸಾಕಷ್ಟು ಸುಳ್ಳು ಆರೋಪಗಳನ್ನು ಮಾಡಿದ್ದ ಅವರು ಯಾವುದನ್ನೂ ಸಾಬೀಪಡಿಸಲು ಸಾಧ್ಯವಾಗಿಲ್ಲ ಬಿಟ್ಟಿ ಪ್ರಚಾರಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ



