ಬೆಂಗಳೂರು : ಕಲ್ಯಾಣ ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪ್ರಸಕ್ತ 2022-23ನೇ ಸಾಲಿನಿಂದಲೇ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 60 ಸೀಟುಗಳೊಂದಿಗೆ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಆರಂಭಿಸಲು ಆದೇಶ ಹೊರಡಿಸಲಾಗಿದೆ.
ಈ ಕುರಿತು ರಾಜ್ಯದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟ್ವೀಟ್ ಮಾಡಿರುವ ಸುಧಾಕರ್ , ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಕೊಡುಗೆ! ಯಾದಗಿರಿಯಲ್ಲಿ 150 ಎಂಬಿಬಿಎಸ್ ಸೀಟುಗಳೊಂದಿಗೆ ನೂತನ ಸರ್ಕಾರಿ ಮೆಡಿಕಲ್ ಕಾಲೇಜಿನ ಆರಂಭಕ್ಕೆ ಅನುಮತಿ ದೊರೆತಿರುವ ಬೆನ್ನಲ್ಲೇ ಈಗ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 60 ಸೀಟುಗಳೊಂದಿಗೆ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್ ಆರಂಭಿಸಲು ಆರೋಗ್ಯ ವಿವಿಯಿಂದ ಅನುಮತಿ ದೊರೆತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 60 ಸೀಟು ಸಹಿತ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಆರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುಮತಿ ನೀಡಿದೆ.
ಮೇಲ್ಕಂಡ ಕೋರ್ಸುಗಳ ಸಂಯೋಜನೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಜೂರಾತಿಯನ್ನು ಪಡೆಯತಕ್ಕದ್ದು. ರಾಜೀವ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಿಗದಿಪಡಿಸಿರುವ ಪರಿನಿಯಮಾವಳಗಳನ್ನು ಕಟ್ಟುನಿಟ್ಟಾಗಿ ಸಾಲಸತಕ್ಕದ್ದು ಹಾಗೂ ವಿಶ್ವವಿದ್ಯಾಲಯವು ನಿಗದಿಸಡಿಸಿರುವ ಮೂಲಭೂತಸೌಲಭ್ಯಗಳನ್ನು ಕಡ್ಡಾಯವಾಗಿ ಹೊಂದತಕ್ಕದ್ದು.
ಸದರಿ ಸಂಸ್ಥೆಯು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅನುಮೋದನೆ ಪಡೆದ ನಂತರವೇ, ನಿಗದಿಪಡಿಸಿರುವ ವಿದ್ಯಾರ್ಥಿಗಳ ಪ್ರವೇಶ ಪಡೆಯತಕ್ಕದ್ದು. ಯಾವುದೇ ಕಾರಣಕ್ಕೆ ಹೆಚ್ಚುವರಿ ವಿದ್ಯಾರ್ಥಿ ಪ್ರವೇಶ ಪಡೆಯತಕ್ಕದ್ದಲ್ಲ. ಇದನ್ನು ಉಲ್ಲಂಘಿಸಿದ್ದಕ್ಕೆ 1991 ರ ಕರ್ನಾಟಕ ಮಾನ್ಯತೆ ರಹಿತ ಮತ್ತು ಸಂಯೋಜಿತ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ನಿಷೇಧ, ಅದಿನಿಯಮದಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯವು ಕಾಲಕಾಲಕ್ಕೆ ನೀಡುವ ಸೂಚನೆ ಹಾಗೂ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಸರ್ಕಾರ ಆದೇಶ ಹೊರಡಿಸಿದೆ.