Share this news

ಕಾರ್ಕಳ: ಮಂಗಳೂರು ವಿಭಾಗ ಉಪ್ಪಿನಂಗಡಿ ವಲಯದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ನಿಡ್ಲೆ ಎಂಬಲ್ಲಿ ವಿಸೃತ ಬ್ಲಾಕ್-2 ಮೀಸಲು ಅರಣ್ಯ ಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರ ಶಾಸಕರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಯನ್ನು ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿರುವುದನ್ನು ಎಂದು ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘವು ತೀವೃವಾಗಿ ಖಂಡಿಸಿದೆ.

ಅವಾಚ್ಯ ಪದಗಳ ಬಗ್ಗೆ ಕನಿಷ್ಟ ಸೌಜನ್ಯಕ್ಕಾದರೂ ಕ್ಷಮೆ ವ್ಯಕ್ತಪಡಿಸದಿರುವುದು ಶಾಸಕರಿಗೆ ಶೋಭೆ ತರುವಂತಹುದಲ್ಲ. ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ, ಜನಪ್ರತಿನಿಧಿಗಳಾಗಲೀ ಅಥವಾ ಶಾಸಕರುಗಳಾಗಲೀ ಈ ನೆಲದ ಕಾನೂನನ್ನು ಪಾಲಿಸಬೇಕಾಗಿರುತ್ತದೆ. ಕಾನೂನಿಗಿಂತ ಯಾರೂ ಮಿಗಿಲಾಗಿರುವುದಿಲ್ಲ ಎಂದಿದೆ.

ವಲಯ ಅರಣ್ಯಾಧಿಕಾರಿಗಳು ಏನೇ ಕರ್ತವ್ಯ ಚ್ಯುತಿ ಮಾಡಿದ್ದರೂ, ಅದನ್ನು ಕಾನೂನಿನ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳಬೇಕಾಗಿರುವುದು ಶಾಸಕರಿಗೆ ತಿಳಿಯದಿರುವ ವಿಷಯವೇನಲ್ಲ. ಆದರೂ ಶಾಸಕರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಗೆ ತನ್ನ ಶಾಸನ ಬದ್ಧ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿ ಅವಾಚ್ಯವಾಗಿ ನಿಂದಿಸಿರುವುದು ಅವರ ಘನತೆಗೆ ತಕ್ಕುದ್ದಾಗಿರುವುದಿಲ್ಲ. ಈ ಘಟನೆಯನ್ನು ಸಂಘವು ಖಂಡಿಸುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಕಾನೂನಿನನ್ವಯ ಸಾರ್ವಜನಿಕ ಕೆಲಸ ನಿರ್ವಹಿಸಲು ನೈತಿಕ ಸ್ಥೆರ್ಯವನ್ನು ಸಂಘವು ನೀಡುತ್ತದೆ. ಮುಂದೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಹೋರಾಟಕ್ಕೂ ಸಹ ಸಂಘವು ಸಿದ್ದವಿರುತ್ತದೆ ಎಂದು ಈ ಮೂಲಕ ಸಂಘವು ಆಗ್ರಹಿಸುತ್ತದೆ ಎಂದು ಅದ್ಯಕ್ಷ ದಿನೇಶ್ ಜಿ.ಡಿ.ತಿಳಿಸಿದ್ದಾರೆ.

 

 

 

 

 

 

 

 

 

Leave a Reply

Your email address will not be published. Required fields are marked *