ಕಾರ್ಕಳ: ಬೈಲೂರು ಪದವಿ ಪೂರ್ವ ಕಾಲೇಜು ಸಮೀಪದ ಎರ್ಲಪಾಡಿ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.
ಪದ್ಮಾಂಬ ಎನ್ನುವ ಖಾಸಗಿ ಬಸ್ ಗೋವಿಂದೂರು ಕಡೆಯಿಂದ ಬೈಲೂರು ಹೈಸ್ಕೂಲ್ ಬಳಿ ಕಾರ್ಕಳ ಉಡುಪಿ ಮುಖ್ಯರಸ್ತೆಗೆ ಬರುತ್ತಿದ್ದ ವೇಳೆ ಬೈಲೂರಿನಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.ಈ ದುರ್ಘಟನೆಯಲ್ಲಿ ಬೈಕ್ ಸವಾರ ನಾಗರಾಜ್ ಸ್ಥಳದಲ್ಲೇ ಮೃತಪಟ್ಟರೆ, ಸಹ ಸವಾರ ಮಂಜು ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರ ಹಾಗೂ ಸಹಸವಾರ ತಮಿಳುನಾಡು ಮೂಲದವರಾಗಿದ್ದು,ಕಲ್ಲಿನ ಕೋರೆಯಲ್ಲಿ ಕಾರ್ಮಿಕರು ಎನ್ನಲಾಗಿದ್ದು, ಪಳ್ಳಿಯ ಕೋಕಾಯಿಕಲ್ ಮದ್ಮಲ್ ಪಾದೆ ಎಂಬಲ್ಲಿ ವಾಸವಿದ್ದರು.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.