Share this news

ಲಾಹೋರ್: ಭಾರತ ಚಂದ್ರನ ಅಂಗಳಕ್ಕೆ ಕಾಲಿರಿಸಿ,ಇದೀಗ ಜಿ20 ಶೃಂಗಸಭೆಯನ್ನು ಆಯೋಜಿಸಿ ಯಶಸ್ವಿಯಾಗಿದೆ,ಅದರೆ ನನ್ನ ದೇಶ ಪಾಕಿಸ್ತಾನ ಮಾತ್ರ ಜಗತ್ತಿನ ಮುಂದೆ ಹಣಕ್ಕಾಗಿ ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರ ಲಂಡನ್‌ನಿಂದ ವಿಡಿಯೋ ಮೂಲಕ ಲಾಹೋರ್‌ನಲ್ಲಿ ಆಯೋಜಿಸಲಾಗಿದ್ದ ತಮ್ಮ ಪಕ್ಷದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಾಕಿಸ್ತಾನದ ಆರ್ಥಿಕತೆ ಕಳೆದ ಹಲವು ವರ್ಷಗಳಿಂದ ಪತನದತ್ತ ಸಾಗುತ್ತಿದೆ. ಅನಿಯಂತ್ರಿತ ಎರಡಂಕಿಯ ಹಣದುಬ್ಬರದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ದೇಶದ ಸೇನೆಯ ಮಾಜಿ ಜನರಲ್‌ಗಳು ಮತ್ತು ನ್ಯಾಯಾಧೀಶರ ತಪ್ಪಿನಿಂದಾಗಿ ಪಾಕಿಸ್ತಾನದ ಆರ್ಥಿಕವಾಗಿ ಅಪಾಯದಲ್ಲಿದೆ ಎಂದು ಪಾಕ್ ವಿರುದ್ಧವೇ ವಾಗ್ದಾಳಿ ನಡೆಸಿದರು.


ಭಾರತದ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತದಿಂದ ಭಾರತ ಚಂದ್ರನನ್ನು ತಲುಪಿದೆ. ಜಿ20 ಶೃಂಗಸಭೆಯನ್ನೂ ಯಶಸ್ವಿಯಾಗಿ ನಡೆಸಿದೆ. ಅದರೆ ಪಾಕಿಸ್ತಾನದ ಪ್ರಧಾನಿ ಮಾತ್ರ ಹಣಕ್ಕಾಗಿ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಭಾರತ ಮಾಡಿರುವ ಅಸಾಮಾನ್ಯ ಸಾಧನೆಯನ್ನು ಪಾಕಿಸ್ತಾನಕ್ಕೆ ಏಕೆ ಸಾಧಿಸಲು ಸಾಧ್ಯವಾಗಲಿಲ್ಲ,ಇದಕ್ಕೆ ಹೊಣೆ ಯಾರು ಎಂದು ದೇಶದ ನಾಗರಿಕರನ್ನು ಪ್ರಶ್ನಿಸಿದರು. ಇದೇ ವೇಳೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ವಿದೇಶಿ ವಿನಿಮಯ ಸಂಗ್ರಹ ಕೇವಲ ಒಂದು ಶತಕೋಟಿ ಡಾಲರ್‌ಗಳಷ್ಟಿತ್ತು. ಆದರೆ ಈಗ 600 ಶತಕೋಟಿ ಡಾಲರ್‌ಗೆ ಏರಿದೆ. ಭಾರತ ಇಂದು ಎಲ್ಲಿಗೆ ತಲುಪಿದೆ ನೋಡಿ. ಪಾಕಿಸ್ತಾನವು ಭಿಕ್ಷಾಟನೆಯಿಂದ ಎಲ್ಲಿ ಉಳಿದಿದೆ ಎಂದು ಪ್ರಶ್ನಿಸಿದರು. ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎಸ್‌ಐ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್ ಪಾಕಿಸ್ತಾನದ ಈ ದುಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ದೂರಿದ್ದಾರೆ.


ಮುಂಬರುವ ಚುನಾವಣೆಗಳಲ್ಲಿ ಪಕ್ಷದ ರಾಜಕೀಯ ಪ್ರಚಾರಕ್ಕೆ ಷರೀಫ್ ಮೊದಲ ಬಾರಿಗೆ ಅಕ್ಟೋಬರ್ 21ರಂದು ದೇಶಕ್ಕೆ ಹಿಂದಿರುಗುವುದಾಗಿ ಘೋಷಿಸಿದರು.
2017ರ ಮಿಲಿಟರಿ ಮತ್ತು ನ್ಯಾಯಾಂಗ ಸ್ಥಾಪನೆಯ ವಿರುದ್ಧವ ವಾಗ್ದಾಳಿ ನಡೆಸಿದ ನವಾಜ್, ತಮ್ಮನ್ನು ಪ್ರಧಾನ ಮಂತ್ರಿ ಕಚೇರಿಯಿಂದ ಮನೆಗೆ ಕಳುಹಿಸಲು ಅವರು ಜವಾಬ್ದಾರರು ಎಂದು ಆರೋಪಿಸಿದರು. ದೇಶವನ್ನು ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಮುಕ್ತಗೊಳಿಸಿದ ವ್ಯಕ್ತಿಯನ್ನು (ನವಾಜ್) ನಾಲ್ವರು ನ್ಯಾಯಾಧೀಶರು ಮನೆಗೆ ಕಳುಹಿಸಿದ್ದಾರೆ ಎಂದು ಷರೀಫ್ ತಮ್ಮ ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದರು. ಆಗಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮುಖ್ಯಸ್ಥ ಜನರಲ್ ಫೈಜ್ ಹಮೀದ್ ತಮ್ಮನ್ನು ಪದಚ್ಯುತಗೊಳಿಸಿದ್ದಾರೆ ಎಂದರು. ಅಲ್ಲದೇ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಎಂದು ಷರೀಫ್ ವಿಶ್ವಾಸ ವ್ಯಕ್ತಪಡಿಸಿದರು.

 

 

Leave a Reply

Your email address will not be published. Required fields are marked *