ಕಾರ್ಕಳ: ಸಂಘ ಪರಿವಾರದ ತತ್ವ ಸಿದ್ದಾಂತಗಳನ್ನು ಬಲಿಕೊಟ್ಟು ಭ್ರಷ್ಟಾಚಾರ ಹಾಗೂ ಹಿಂದೂ ವಿರೋಧಿ ನೀತಿಯಿಂದಲೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಾಗಿದೆ, ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಬಿಜೆಪಿ ಮಸಿ ಬಳಿದಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಕಾರ್ಕಳದ ಪಾಂಚಜನ್ಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದ ಜನತೆ ಬಿಜೆಪಿ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡು ಬೇರೆ ಆಯ್ಕೆಯಿಲ್ಲದೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ಆಡಳಿತದಲ್ಲಿ ಭ್ರಷ್ಟಾಚಾರ ವ್ಯವಸ್ಥೆಯನ್ನು ಹುಟ್ಟು ಹಾಕಿರುವ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿರುವುದು ನಿಜಕ್ಕೂ ರಾಜ್ಯದ ದುರಂತ ಎಂದು ಮುತಾಲಿಕ್ ಬಣ್ಣಿಸಿದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ 4-5 ಅಮಾಯಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂ ಕಾರ್ಯಕರ್ತರನ್ನು ದುರುಪಯೋಗಪಡಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದುತ್ವ ಮರೆತು ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದರು. ಅದರ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಕೇವಲ 65 ಸ್ಥಾನಗಳಿಗೆ ಕುಸಿಯಲು ಕಾರಣವಾಯಿತು ಎಂದು ಆರೋಪಿಸಿದರು.
ಕಾರ್ಕಳದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರೂ ನಾನು ಎದೆಗುಂದಿಲ್ಲ, ಭ್ರಷ್ಟಾಚಾರ ಹಾಗೂ ಹಿಂದುತ್ವಕ್ಕಾಗಿ ನನ್ನ ಹೋರಾಟ ಎಂದಿಗೂ ನಿಲ್ಲುವುದಿಲ್ಲ,ನಮ್ಮ ಕಾರ್ಯಕರ್ತರಲ್ಲಿ ವಿಶ್ವಾಸಮೂಡಿಸುವ ನಿಟ್ಟಿನಲ್ಲಿ ನಾನು ಕಾರ್ಕಳವನ್ನು ಕೇಂದ್ರಸ್ಥಾನವಾಗಿಸಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಈಗಾಗಲೇ ಕಾರ್ಕಳ ಶಾಸಕರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದ್ದು, ಇದರ ಕುರಿತು ನ್ಯಾಯಾಲಯಕ್ಕೂ ದೂರು ನೀಡಲಾಗುತ್ತದೆ ಎಂದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆಲುವು ಸಾಧಿಸಿದ ಬಳಿಕ ಮುತಾಲಿಕ್ ಅವರದ್ದು ಕಾಂಗ್ರೆಸ್ ಬಿ ಟೀಮ್ ಎನ್ನುವ ಹೇಳಿಕೆ ನೀಡಿದ್ದು, ಬಿ ಟೀಮ್ ಆಗಿದ್ದರೆ ನಾನು ಕೂಡ ಕಾಂಗ್ರೆಸ್,ಬಿಜೆಪಿಯವರ ಹಾಗೆ ಸಮಾವೇಶಕ್ಕೆ ಜನರನ್ನು ಸೇರಿಸುತ್ತಿದ್ದೆ ಎಂದರು.ನಾನು ಹಣ ಮಾಡುವ ಉದ್ದೇಶವಿದ್ದರೆ ದೂರದ ಕಾರ್ಕಳಕ್ಕೆ ಬರಬೇಕಿರಲಿಲ್ಲ ಹಾಗೂ ಹಣ ಸಂಪಾದನೆಗೆ ಇಷ್ಟು ಸಮಯ ಕೂಡ ಬೇಕಿರಲಿಲ್ಲ ಆದರೆ ಮುತಾಲಿಕ್ ಕಾಂಗ್ರೆಸ್ ನವರಲ್ಲಿ ಹಣ ಪಡೆದಿದ್ದಾರೆ ಎಂದು ಬಹಿರಂರವಾಗಿ ಸುಳ್ಳು ಆಪಾದನೆ ಮಾಡಿರುವ ಸುನಿಲ್ ಕುಮಾರ್ ವಿರುದ್ಧ ಕಾರ್ಕಳ ಮಾರಿಗುಡಿಯಲ್ಲಿ ತೆಂಗಿನಕಾಯಿ ಇಟ್ಟು ಮಾರಿಯಮ್ಮನಿಗೆ ದೂರು ನೀಡಲಾಗುವುದು, ನಾನು ತಪ್ಪು ಮಾಡಿದ್ದರೆ ಮಾರಿಯಮ್ಮ ನನಗೆ ಶಿಕ್ಷೆ ನೀಡಲಿ ಇಲ್ಲವಾದರೆ ಸುಳ್ಳು ಆಪಾದನೆ ಮಾಡಿದವರಿಗೆ ಶಿಕ್ಷೆಯಾಗಲಿ ಎಂದರು.

ಹಿAದುತ್ವದ ಪರವಾಗಿ ನಿಮ್ಮ ಮುಂದಿನ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹುಟ್ಟುಹೋರಾಟಗಾರ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಬಜರಂಗದಳ ನಿಷೇಧ, ಗೋಹತ್ಯೆಗೆ ನಿಷೇದ ವಾಪಾಸು ಪಡೆಯುತ್ತೇವೆ ಎನ್ನುವ ಹೇಳಿಕೆ ನೀಡಿದ್ದು ಅದನ್ನು ಅನುಷ್ಠಾನ ಮಾಡಲು ಮುಂದಾದರೆ ರಾಜ್ಯದ 3.5 ಲಕ್ಷ ಶ್ರೀರಾಮ ಸೇನೆ ಕಾರ್ಯಕರ್ತರು ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಮುತಾಲಿಕ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ನ್ಯಾಯವಾದಿ ಹರೀಶ್ ಅಧಿಕಾರಿ, ವಿವೇಕಾನಂದ ಶೆಣೈ, ದಿವ್ಯಾ ನಾಯಕ್ ಉಪಸ್ಥಿತರಿದ್ದರು.

