ನವದೆಹಲಿ: ಕೇರಳಕ್ಕೆ ಮುಂಗಾರು ಜೂ.4ರಂದು ಆಗಮಿಸದೇ ವಿಳಂಬವಾಗಿರುವ ನಡುವೆಯೇ, ಮುಂಗಾರು ಅಗಮಿಸಲು ಮತ್ತೊಂದು ಅಡ್ಡಿ ಎದುರಾಗಿದೆ. ನೈರುತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಗೋಚರವಾಗಿದ್ದು, ಇದು ಮುಂಗಾರು ಮಾರುತಗಳು ಕೇರಳದತ್ತ ನುಗ್ಗಲು ಅಡ್ಡಿ ಮಾಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರಿಂದಾಗಿ ದೇಶದಲ್ಲಿ ಮಳೆಗಾಲ ಆರಂಭ ಇನ್ನಷ್ಟು ತಡ ಆಗುವ ಸಾಧ್ಯತೆ ಹೆಚ್ಚಿದೆ.

ನೈರುತ್ಯ ಅರಬ್ಬಿ ಸಮುದ್ರದಲ್ಲಿ ಸುಮಾರು 2.1 ಕಿ.ಮೀ. ಎತ್ತರದವರೆಗೆ ಮಾರುತಗಳು ಬೀಸುತ್ತಿವೆ. ಇವು ಉತ್ತರ ದಿಕ್ಕಿನತ್ತ ಸಾಗಿ 24 ಗಂಟೆಗಳಲ್ಲಿ ಕಡಿಮೆ ಒತ್ತಡ ವಾತಾವರಣ ಸೃಷ್ಟಿಸಲಿವೆ. ಇವು ಮುಂಗಾರು ಮಾರುತಗಳು ಕೇರಳದತ್ತ ನುಗ್ಗುವ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದರೆ, ಮುಂಗಾರು ಯಾವಾಗ ಕೇರಳವನ್ನು ಪ್ರವೇಶಿಸಬಹುದು ಎಂಬುದರ ಬಗ್ಗೆ ನಿಖರವಾದ ದಿನಾಂಕವನ್ನು ಇಲಾಖೆ ಸ್ಪಷ್ಟಪಡಿಸಿಲ್ಲ. ಈ ಮೊದಲು ಜೂ.4ರಂದು ಮುಂಗಾರು ಕೇರಳ ಪ್ರವೇಶಿಸಬಹುದು ಎಂದಿತ್ತು. ಬಳಿಕ ಇದು 4 ದಿನ ತಡವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು.
2018ರಲ್ಲಿ ಮುಂಗಾರು ಮೇ 29ರಂದು ಕೇರಳವನ್ನು ಪ್ರವೇಶಿಸಿತ್ತು. ಬಳಿಕ 2019ರಲ್ಲಿ ಜೂ.8, 2020ರಲ್ಲಿ ಜೂ.1, 2021ರಲ್ಲಿ ಜೂ.3, 2022ರಲ್ಲಿ ಮೇ 29ರಂದು ಕೇರಳ ಪ್ರವೇಶಿಸಿತ್ತು.

