ಕಾರ್ಕಳ:ಸೇವೆಯೇ ತನ್ನ ಜೀವನದ ಧ್ಯೇಯ ಎನ್ನುವಂತೆ ಸಮಾಜಕ್ಕಾಗಿ ಬದುಕಿದ್ದ ಗೊಪಾಲ ಭಂಡಾರಿಯವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು.ವೀರಪ್ಪ ಮೊಯ್ಲಿಯವರ ಸ್ವಾಮಿನಿಷ್ಟೆ ಹಾಗೂ ಪಕ್ಷ ನಿಷ್ಠೆಯಿಂದ ಪ್ರಾಮಾಣಿಕ ರಾಜಕಾರಣ ಮಾಡಿರುವ ಭಂಡಾರಿಯವರ ಹೆಸರು ಸಮಾಜದಲ್ಲಿ ಎಂದಿಗೂ ಶಾಶ್ವತವಾಗಿ ಉಳಿಯಲಿದೆ ಎಂದು ವಿನಯಕುಮಾರ್ ಸೊರಕೆ ಹೇಳಿದರು.

ಅವರು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ 4ನೇ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಂಡಾರಿಯವರ ಕುರಿತು ನುಡಿ ನಮನ ಸಲ್ಲಿಸಿ ಮಾತನಾಡಿದರು.
ಗೋಪಾಲ ಭಂಡಾರಿಯವರ ಆದರ್ಶಗಳು,ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮಾಜಿ ಸಚಿವ ಬಿ. ರಮಾನಾಥ ರೈ ನುಡಿನಮನ ಸಲ್ಲಿಸಿ ಮಾತನಾಡಿ,
ಸಾಮಾಜಿಕ ಬದುಕಿನಲ್ಲಿ ಗೋಪಾಲ ಭಂಡಾರಿಯವರ ಹೆಸರು ಅಚ್ಚಳಿಯದೇ ಉಳಿಯುವಂತಾಗಿದೆ.ಹಿರಿಯ ಗೌರವ ಕಿರಿಯರಿಗೆ ಸಲಹೆ ನೀಡುವ ಮೌಲ್ಯಯುತ ರಾಜಕಾರಣಿಯಾಗಿದ್ದರು.ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಜನರ ಜತೆಗಿದ್ದ ಭಂಡಾರಿಯವರು ಜನಸಾಮಾನ್ಯರ ಶಾಸಕರಾಗಿ ಗುರುತಿಸಿಕೊಂಡಿದ್ದರು. ಸದನದಲ್ಲಿ ಉತ್ತಮ ಸಂಸದೀಯಪಟುವಾಗಿ ಮಂಡಿಸುತ್ತಿದ್ದ ವಿಚಾರಧಾರೆಗಳು ಎಂದಿಗೂ ಚಿರಸ್ಥಾಯಿಯಾಗಿದೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನುಡಿನಮನ ಸಲ್ಲಿಸಿ, ಭಂಡಾರಿಯವರು ಸಮಾಜದ ಏಳಿಗೆಗಾಗಿ ರಾಜಕಾರಣ ಮಾಡಿದರೇ ಹೊರತು ಸ್ವಾರ್ಥಕ್ಕಾಗಿ ಏನೂ ಮಾಡಿಲ್ಲ.ಅವರು ಉದಯೋನ್ಮುಖ ಹಾಗೂ ಹಿರಿಯ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.ಅವರ ಸರಳ ಸಜ್ಜನಿಕೆ,ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಅವರು ಕಾರ್ಕಳ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಮಾತನಾಡಿ,ಗೋಪಾಲ ಭಂಡಾರಿಯವರು ತನ್ನ ಜೀವನದುದ್ದಕ್ಕೂ ಬಡವರ ಹಾಗೂ ಅಶಕ್ತರ ನೋವಿಗೆ ಸ್ಪಂದಿಸುವ ಮೂಲಕ ಅಜರಾಮರರಾಗಿದ್ದಾರೆ.ಅವರ ಆದರ್ಶಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಸದಾ ಬಡವರ ಪರವಾಗಿ ಕೆಲಸ ನಿರ್ವಹಿಸುವುದಾಗಿ ಹೇಳಿದರು. ಇದಲ್ಲದೇ ಅವರ ನೆನಪು ಅಚ್ಚಳಿಯದೇ ಉಳಿಸುವ ನಿಟ್ಟಿನಲ್ಲಿ ಹೆಬ್ರಿಯಲ್ಲಿ ಪುತ್ಥಳಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಭಂಡಾರಿ ಸಹೋದರ ರಾಜೇಶ್ ಭಂಡಾರಿ, ಪುತ್ರಿ ದೀಪಾ ,ಅಳಿಯ ಶ್ವೇತ್ ಕುಮಾರ್, ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಡಿ.ಅರ್ ರಾಜು,ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್,ಸದಾಶಿವ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ಹಿರಿಯ ನ್ಯಾಯವಾದಿ ಶೇಖರ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಂಗ್ರೆಸ್ ವಕ್ತಾರ ಹಾಗೂ ಪುರಸಭಾ ಸದಸ್ಯ ಶುಭದ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸುಮಾರು 250ಕ್ಕೂ ಅಧಿಕ ಮಂದಿ ರಕ್ತದಾನ ಶಿಬಿರ ಹಾಗೂ ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು

