Share this news

ನವದೆಹಲಿ : ಇಂದು (ಜೂನ್ 7)  ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೊಗರಿ ಬೇಳೆ, ಉದ್ದಿನಬೇಳೆ, ಭತ್ತ ಮತ್ತು ಮೆಕ್ಕೆಜೋಳದ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. 2023-24ರ ಮಾರುಕಟ್ಟೆ ಋತುವಿಗಾಗಿ ಬೇಸಿಗೆ ಕಾಲದ ಅಥವಾ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ

 ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಪ್ರತಿ ಕ್ವಿಂಟಾಲ್‌ ತೊಗರಿ ಬೇಳೆಗೆ 400 ರೂ.ಗಳಷ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಇದರಿಂದ ತೊಗರಿ ಬೇಳೆಯ MSP ಪ್ರತಿ ಕ್ವಿಂಟಲ್‌ಗೆ 7,000 ರೂ.ಗೆ ಏರಿಕೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.  ಅದೇ ರೀತಿ, ಉದ್ದಿನ ಬೇಳೆಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಕ್ವಿಂಟಲ್‌ಗೆ 350 ರೂ.ಗಳ ಹೆಚ್ಚಳವನ್ನು ಅನುಮೋದಿಸಲಾಗಿದೆ. ಇದರಿಂದ ಒಂದು ಕ್ವಿಂಟಲ್‌ ಉದ್ದಿನ ಬೇಳೆಯ ಬೆಲೆ 6950 ರೂ.ಗೆ ಹೆಚ್ಚಳವಾಗಿದೆ. 

 2023-24ರಲ್ಲಿ ಸಾಮಾನ್ಯ ದರ್ಜೆಯ ಭತ್ತವನ್ನು ಕ್ವಿಂಟಲ್‌ಗೆ 143 ರೂ.ಗಳ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದಿಸಿದ್ದು, ಇದರಿಂದ 2,183 ರೂ.ಗೆ ಹೆಚ್ಚಳವಾಗಿದೆ. ಇನ್ನು ಹೆಸರು ಬೇಳೆಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ 8,558 ರೂ.ಗಳಲ್ಲಿ ಗರಿಷ್ಠ ಏರಿಕೆ ಕಂಡಿದೆ. ಈ ಮಧ್ಯೆ, ಸೋಯಾಬೀನ್‌ಗೆ ಪ್ರಸ್ತುತ ಕ್ವಿಂಟಲ್‌ಗೆ 4,600 ರೂ., ಎಳ್ಳು ಕ್ವಿಂಟಲ್‌ಗೆ 8,635 ರೂ., ನೈಜರ್‌ಬೀಜಕ್ಕೆ 7,734 ರೂ. ಮತ್ತು ಹತ್ತಿ ಕ್ವಿಂಟಲ್‌ಗೆ 6,620 ರೂ. ಹತ್ತಿಗೆ (ಉದ್ದದ ಪ್ರಧಾನ) MSP ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ 7,020 ರೂ. ಆಗಿದೆ ಎಂದು ವರದಿಯಾಗಿದೆ.

ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಬೆಳೆ ಹಾನಿಯನ್ನು ಕಡಿಮೆ ಮಾಡಲು ಮತ್ತು ರೈತರ ಸಂಕಷ್ಟದ ಮಾರಾಟವನ್ನು ತಡೆಯಲು ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಸಾಮರ್ಥ್ಯವನ್ನು ರಚಿಸಲು ಕೇಂದ್ರ ಸಚಿವ ಸಂಪುಟವು ಕಳೆದ ವಾರ ರೂ 1 ಲಕ್ಷ ಕೋಟಿ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ.

Leave a Reply

Your email address will not be published. Required fields are marked *