Share this news

ಕಾರ್ಕಳ: ಮುಂಡ್ಕೂರು ಗ್ರಾಮ ಪಂಚಾಯತ್‌ನ ದ್ವಿತೀಯ ಹಂತದ ಗ್ರಾಮ ಸಭೆಯು ಇಂದು ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಕೃಷಿ ಇಲಾಖೆಯ ಸತೀಶ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಸಂಕಲಕರಿಯದ ಉಗ್ಗೆದಬೆಟ್ಟು ಹಾಗೂ ಕೃಷ್ಣಬೆಟ್ಟು ಗ್ರಾಮಸ್ಥರ ನಡುವೆ ಮರಳುಗಾರಿಕೆ ಹಾಗೂ ರಸ್ತೆ ಅಗೆತದ ಬಗ್ಗೆ ಭಾರೀ ಮಾತಿನ ಚಕಮಕಿ ನಡೆಯಿತು. ಪಂಚಾಯತ್ ಮಾಜಿ ಸದಸ್ಯ ಸೋಮನಾಥ್ ಪೂಜಾರಿ ಉಗ್ಗೆದಬೆಟ್ಟು ಅಲ್ಲಿನ ನಿವಾಸಿಗಳ ಪರವಾಗಿ ಮಾತನಾಡಿ, ಶಾಂಭವಿ ನದಿಯಿಂದ ಪ್ರಕಾಶ ಸಫಲಿಗ ಎಂಬುವವರು ಮರಳುಗಾರಿಕೆ ಮಾಡುತ್ತಿದ್ದು,ಮರಳು ಸಾಗಾಟದ ವಾಹನಗಳಿಂದಾಗಿ ರಸ್ತೆ ಹಾಳಾಗುತ್ತಿರುವುದಲ್ಲದೇ, ರಸ್ತೆಯ ಬದಿಯಲ್ಲೇ ಅಂಗನವಾಡಿ ಕೇಂದ್ರ ಇರುವುದರಿಂದ ತೊಂದರೆಯಾಗುತ್ತಿದೆ. ಈ ಕುರಿತು ಮರಳುಗಾರಿಕೆ ನಿಲ್ಲಿಸಬೇಕೆಂದು ಪಂಚಾಯತ್‌ಗೆ ಹಲವು ಬಾರಿ ಮನವಿಯನ್ನು ಕೂಡ ನೀಡಿದ್ದೇವೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಮರಳುಗಾರಿಕೆ ನಡೆಸುತ್ತಿರುವವರ ಪರವಾಗಿ ಕೃಷ್ಣಬೆಟ್ಟುವಿನ ರಿಚರ್ಡ್ ಮಾತನಾಡಿ, ನಾವು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿಲ್ಲ, ಪಂಚಾಯತ್ ಪರವಾನಿಗೆಯಿಂದ ಮರಳುಗಾರಿಕೆ ಮಾಡುತ್ತಿದ್ದೇವೆ ಎಂದರು.
ಇದಕ್ಕೆ ಪ್ರತಿಯಾಗಿ ಸೋಮನಾಥ ಪೂಜಾರಿ ಮಾತನಾಡಿ, ಯಾವುದೇ ಕಾರಣಕ್ಕೂ ಇಲ್ಲಿ ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಾಗ, ಮರಳು ಪರವಾನಿಗೆಯ ಬಗ್ಗೆ ತಾಲೂಕು ಸಮಿತಿಯಲ್ಲಿ ನಿರ್ಣಯಿಸಲಾಗುವುದು ಎಂದು ಪಂಚಾಯತ್ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ತಿಳಿಸಿದರು.

ಕಷ್ಣಬೆಟ್ಟು ನಿವಾಸಿಗಳ ಪರವಾಗಿ ಮಾತನಾಡಿದ ಜೆಸಿಂತಾ, ಅಶ್ವತ್ಥ ಕಟ್ಟೆಯ ಬಳಿ ಹಲವು ವರ್ಷಗಳಿಂದ ಇದ್ದ ರಸ್ತೆಯನ್ನು ಅಗೆಯಲಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದಾಗ, ಮಾಜಿ ಸದಸ್ಯ ಸೋಮನಾಥ್ ಪೂಜಾರಿ, ಈ ರಸ್ತೆಯಲ್ಲಿ ವಾಹನ ಸಂಚಾರ ಸಂದರ್ಭದಲ್ಲಿ ಕೆಸರಿನಿಂದ ಅಶ್ವತ ಕಟ್ಟೆ ಪವಿತ್ರತೆ ಹಾಳಾಗುತ್ತಿದ್ದು, ಈ ಕಾರಣಕ್ಕಾಗಿ ಪಂಚಾಯತ್ ವತಿಯಿಂದ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಮೋರಿ ನಿರ್ಮಿಸಿ ನೂತನ ರಸ್ತೆ ಮಾಡಿಕೊಡಲಾಗಿದೆ ಎಂದರು.

ಸಚ್ಚರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ್, ಪಶು ಇಲಾಖೆಯ ನದಾಫ್, ಮೆಸ್ಕಾಂ ಶಾಖಾಧಿಕಾರಿ ನೋಣಯ್ಯ ಪೂಜಾರಿ, ಅರಣ್ಯ ಇಲಾಖೆಯ ಸಂತೋಷ್, ಶಿಕ್ಷಣ ಇಲಾಖೆಯ ಪರವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ, ಕಂದಾಯ ಇಲಾಖೆಯ ಹನುಮಂತ ಮತ್ತಿತರರು ಇಲಾಖೆಯ ಮಾಹಿತಿ ನೀಡಿದರು.
ಈ ವೇಳೆ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗೈರಾಗಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗೋಕುಲನಗರ ಅಂಗನವಾಡಿ ಪಕ್ಕದ ಮರ ತೆರವು, ಕಿಟಕಿ ದುರಸ್ತಿ, ಸಂಕಲಕರಿಯ ದಾರಿದೀಪದ ಅವ್ಯವಸ್ಥೆಯ, ಪಡಿತಾರ್ ವಿದ್ಯುತ್ ತಂತಿಯ ಬಗ್ಗೆ ದೂರಗಳು ಕೇಳಿಬಂದವು

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಮಲ್ಲಿಕಾ ವರದಿ ವಾಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಪರವ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *