ಹೆಬ್ರಿ: ವರಂಗ ಗ್ರಾಮದ ಮುನಿಯಾಲು ಸಮೀಪದ ಮುದೆಲ್ಕಡಿ ಎಂಬಲ್ಲಿನ ಅಂಗನವಾಡಿ ಕೇಂದ್ರಕ್ಕೆ ಅತಿವೇಗವಾಗಿ ಬಂದ ಮಹೀಂದ್ರಾ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಪರಿಣಾಮ ಅಂಗನವಾಡಿಯಲ್ಲಿದ್ದ ಪುಟಾಣಿಗಳು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಕೇರಳ ಮೂಲದ ಬಿಜು ಎಂಬಾತ ಮುನಿಯಾಲು ಕಡೆಯಿಂದ ಕಡ್ತಲ ಕಡೆಗೆ ತನ್ನ ಮಹೀಂದ್ರಾ ಜೀಪನ್ನು ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಮುದೆಲ್ಕಡಿ ಅಂಗನವಾಡಿ ಬಳಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಎಕಿ ಜೀಪ್ ನೇರವಾಗಿ ಅಂಗನವಾಡಿಯತ್ತ ನುಗ್ಗಿದೆ. ಚರಂಡಿ ಹಾರಿಬಂದ ಜೀಪ್ ಪಕ್ಕದಲ್ಲಿ ನಿಂತಿದ್ದ ಗೂಡ್ಸ್ ವಾಹನಕ್ಕೆ ಹಿಂದಿನ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನ ಮುಂದಕ್ಕೆ ಚಲಿಸಿ ಅಂಗನವಾಡಿಯ ಗೋಡೆಗೆ ಹಾನಿಯಾಗಿದ್ದು ಭಾರೀ ದುರಂತವೊಂದು ತಪ್ಪಿದೆ. ಒಂದುವೇಳೆ ಗೂಡ್ಸ್ ವಾಹನ ಇಲ್ಲದಿದ್ದಲ್ಲಿ ಜೀಪ್ ನೇರವಾಗಿ ಅಂಗನವಾಡಿ ಕಟ್ಟಡಕ್ಕೆ ಡಿಕ್ಕಿಯಾಗುವ ಸಾಧ್ಯತೆಯಿತ್ತು.
ಅಪಘಾತದ ಸಂದರ್ಭದಲ್ಲಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಬಂದಿದ್ದ ಪೋಷಕರು ಹೊರಗಡೆಯಿದ್ದರೂ ಅಪಾಯದಿಂದ ಪಾರಾಗಿದ್ದಾರೆ.
ಚಾಲಕ ಬಿಜು ಎಂಬಾತನ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದು,ಹಾನಿಯಾಗಿರು ಅಂಗನವಾಡಿ ಕೇಂದ್ರವನ್ನು ದುರಸ್ತಿಗೊಳಿಸುವುದಾಗಿ ಹೇಳಿದ್ದಾನೆ.
ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

