ಮೂಡುಬಿದಿರೆ: ಈದ್ ಮಿಲಾದ್ ದಿನ ಮೂಡುಬಿದಿರೆಯಲ್ಲಿ ಕೂಡ ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ ಇಡುವ ಮೂಲಕ ಕಿಡಿಗೇಡಿಗಳು ಗಲಭೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗೇರು ಎಂಬಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಅವರ ಸಮಯ ಪ್ರಜ್ಞೆಯಿಂದ ಆಗಬಹುದಾದ ಗಲಭೆ ಅನಾಹುತ ತಪ್ಪಿದೆ.
ಸೆಪ್ಟೆಂಬರ್ 30ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈದ್ ಮಿಲಾದ್ ದಿನ ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವನ್ನು ಇಟ್ಟಿದ್ದರು. ಈ ಬಗ್ಗೆ ಹೊಸಬೆಟ್ಟು ಪಂಚಾಯತ್ ಪಿಡಿಒ ಗಮನಕ್ಕೆ ತಂದರೂ ಸಹ ಅದನ್ನು ತೆರವು ಮಾಡದೇ ಬೇಜವಾಬ್ದಾರಿ ತೋರಿದ್ದಾರೆ. ಹೊಸಬೆಟ್ಟು ಪಿಡಿಓ ಶೇಖರ್ ವರ್ತನೆಗೆ ಕೆಂಡಾಮಂಡಲರಾದ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್, ಪಿಡಿಓಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹಸಿರು ಬಾವುಟ ಇಟ್ಟಿದ್ದ ಸ್ಥಳಕ್ಕೆ ಆಗಮಿಸಿದ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್, ಪಿಡಿಓ ವಿರುದ್ದ ಕೆಂಡಮಂಡಲರಾಗಿದ್ದಾರೆ. ಇದರ ಮೇಲೆ ಬಾವುಟ ಹಾಕಲಿಕ್ಕೆ ಪರ್ಮಿಷನ್ ತೆಗೆದುಕೊಂಡಿದ್ದಾರಾ? ನಿನ್ನ ಕೆಲಸ ಏನು ಅಂತ ನಿನಗೆ ಗೊತ್ತಿಲ್ಲ, ಏನ್ ಮಾಡ್ತಾ ಇದ್ದೀಯಾ?ಅವರು ಪರ್ಮಿಷನ್ ತೆಗೆದುಕೊಂಡಿಲ್ಲ ಅಂದ್ರೆ ಪೊಲೀಸ್ ದೂರು ಕೊಡಬೇಕು ನಿನ್ನ ಅಧಿಕಾರ ಏನು ಅಂತ ನಿನಗೆ ಗೊತ್ತಿಲ್ವ? ಸಂಬಂಧ ಇಲ್ಲ ಎಂದು ಹೇಳುವ ನೀನ್ಯಾಕೆ ಪಿ ಡಿ ಒ ಆಗಿದ್ದಿ ಎಂದು ಪಿಡಿಒ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ಮೂಲಕ ಇನ್ಸ್ಪೆಕ್ಟರ್ ಬಾವುಟವನ್ನು ತೆರವು ಮಾಡಿದರು.
ಈದ್ ಮಿಲಾದ್ ದಿನ ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಗಲಭೆಗೆ ಯತ್ನಿಸಿದ್ದ ಕಿಡಿಗೇಡಿಗಳು ಯಾರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಈ ಹಿಂದೆಯೂ ಬೇರೆ ಪ್ರದೇಶದಲ್ಲಿ ಒಂದೇ ಕೋಮಿನ ಕಿಡಿಗೇಡಿಗಳು ಈತರಹದ ಹುಚ್ಚಾಟಗಳನ್ನು ಮಾಡಿ ದುಷ್ಕೃತ್ಯ ಮೆರೆದಿದ್ದರು .