ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಾರ್ಗವಾಗಿ ಹಾಗೂ ಮೂಡುಬಿದಿರೆ ಕೇಂದ್ರಿತವಾಗಿ ಬೆಳ್ಮಣ್, ಶಿರ್ತಾಡಿ-ನಾರಾವಿ, ವೇಣೂರು-ಬೆಳ್ತಂಗಡಿ, ಬಿ.ಸಿ. ರೋಡ್ ಕಿನ್ನಿಗೋಳಿ, ಕಟೀಲು, ಇರುವೈಲು ಮಾರ್ಗಗಳಲ್ಲಿ ಸರಕಾರಿ ಬಸ್ ಸೌಕರ್ಯ ಒದಗಿಸಬೇಕು ಎಂದು ಜವನೆರ್ ಬೆದ್ರ’ದ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಆಗ್ರಹಿಸಿದ್ದಾರೆ.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಗೆ ಬರುವ ಹಾಗೂ ಮೂಡುಬಿದಿರೆಯಿಂದ ತಾಲೂಕು ಕೇಂದ್ರಗಳು ಉದ್ಯೋಗ ಮತ್ತು ಪ್ರವಾಸೋದ್ಯಮಕ್ಕಾಗಿ ಸಂಚರಿಸುವರು ಸದ್ಯ ಖಾಸಗಿ ಬಸ್‌ಗಳನ್ನು ಅವಲಂಬಿಸಬೇಕಾಗಿದೆ. ಸರಕಾರಿ ಬಸ್‌ಗಳಲ್ಲಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ಬಹಳಷ್ಟು ರಿಯಾಯಿತಿ ಲಭಿಸುತ್ತಿದೆ. ಇದೀಗ ಸರಕಾರ ಘೋಷಿಸಿರುವ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಕರ್ಯವೂ ಸಿಗಬೇಕಾದರೆ ಈ ಮಾರ್ಗಗಳಲ್ಲಿ ಸರ್ಕಾರಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ, ಸಾರಿಗೆ ಸಚಿವರು, ವಿಧಾನಸಭಾ ಸ್ಪೀಕರ್, ಕ್ಷೇತ್ರದ ಮತ್ತು ಶಾಸಕರು, ಸಂಸದರು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಸರಕಾರ ಮೂರು ತಿಂಗಳ ಒಳಗಾಗಿ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜವಣೆರ್ ಬೆದ್ರ ಗೌರವ ಸಲಹೆಗಾರ ರಾಜೇಂದ್ರ ಜಿ., ಕ್ರೀಡಾ ಸಂಚಾಲಕ ನಾರಾಯಣ ಪಡುಮಲೆ, ರಕ್ತನಿಧಿ ಪ್ರಮುಖ್ ಮನೋಹರ ಉಪಸ್ಥಿತರಿದ್ದರು.