ನವದೆಹಲಿ: ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯನ್ನು ತಡೆಹಿಡಿಯಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಿಕ್ಷೆಗೆ ಮಧ್ಯಂತರ ತಡೆ ನೀಡಿದೆ.
ಗುಜರಾತ್ ಸರ್ಕಾರದ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು 2019 ರಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಎಲ್ಲ ಕಳ್ಳರ ಸರ್‌ನೇಮ್ ಮೋದಿ ಎಂದೇ ಯಾಕಿದೆ ಎಂದು ಕೇಳಿದ್ದರು. ಈ ಹೇಳಿಕೆಯಿಂದ ರಾಹುಲ್ ಮೋದಿ ಹೆಸರಿರುವವರನ್ನು ಅವಮಾನಿಸಿದ್ದಾರೆ ಎಂದು ಪೂರ್ಣೇಶ್ ಮೋದಿ ದೂರಿದ್ದರು.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಇರುವ ನ್ಯಾಯಮೂರ್ತಿ ಬಿ.ಆರ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಪ್ರಸ್ತುತ ಅರ್ಜಿ ವಿಚಾರಣೆ ನಡೆಸಿದ್ದು, ರಾಹುಲ್ ಗಾಂಧಿಗೆ ಗರಿಷ್ಠ ಎರಡು ವರ್ಷಗಳು ಅದಕ್ಕಿಂತ ಒಂದು ದಿನವೂ ಕಮ್ಮಿ ಎಲ್ಲ ಎಂಬAತೆ ಶಿಕ್ಷೆ ವಿಧಿಸಲು ಯಾವುದೇ ಕಾರಣವನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ರಾಹುಲ್ ಗಾಂಧಿಯವರ ಆಪಾದಿತ ಹೇಳಿಕೆಗಳು ಉತ್ತಮ ಅಭಿರುಚಿಯಲ್ಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಾರ್ವಜನಿಕ ಜೀವನದಲ್ಲಿ ಒಬ್ಬ ವ್ಯಕ್ತಿಯು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ರಾಹುಲ್ ಹೆಚ್ಚು ಜಾಗರೂಕರಾಗಿರಬೇಕಿತ್ತು ಎಂದು ನ್ಯಾಯಪೀಠ ಹೇಳಿದೆ. ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮಾನನಷ್ಟ ಪ್ರಕರಣವು ಗಂಭೀರ ಅಪರಾಧವಲ್ಲ. ಜಾಮೀನು ನೀಡಬಹುದಾದ ಮತ್ತು ಸಂಯೋಜಿತ ಅಪರಾಧವಾಗಿದೆ ಎಂದು ವಾದಿಸಿದರು. ಗರಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸಿದ ಮತ್ತೊಂದು ಪ್ರಕರಣವನ್ನು ನಾನು ನೋಡಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವಿದೆ. ಅವರು ಅತ್ಯಾಚಾರ, ಅಪಹರಣ ಅಥವಾ ಕೊಲೆಯಂತಹ ಯಾವುದೇ ಗಂಭೀರ ಅಪರಾಧ ಎಸಗಿಲ್ಲ, ಇದು ನೈತಿಕ ಅವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಗಾಂಧಿ ಅವರಿಗೆ ಈಗಾಗಲೇ ಎರಡು ಸಂಸತ್ ಅಧಿವೇಶನಗಳು ಕೈತಪ್ಪಿ ಹೋಗಿವೆ ಎಂದಿದ್ದಾರೆ.