ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ಆಂಧ್ರಪ್ರದೇಶ ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೃತರು ಆಂಧ್ರ ಜಿಲ್ಲೆಯ ನಂದ್ಯಾಲ ಜಿಲ್ಲೆಯ ವೆಲ್ ಗೋಡ್ ಗ್ರಾಮದವರಾಗಿದ್ದು, ಮುನೀರ್ (40), ನಯಾಮತ್ (40) ಮುದಶಿರ್ (12) ರಮೀಜಾ ಬೇಗಂ (50) ಸುಮ್ಮಿ (12) ಮೃತ ದುರ್ದೈವಿಗಳು.
ಯಾದಗಿರಿ ತಾಲೂಕಿನ ಬಳಿ ಚಕ್ರಾ ಗ್ರಾಮದ ಬಳಿ ನಿಂತಿದ್ದ ಲಾರಿಗೆ ಕ್ರೂಷರ್ ವಾಹನ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ರಾತ್ರಿ ಆಂಧ್ರದ ನಂದ್ಯಾಲ್ ಜಿಲ್ಲೆಯಿಂದ ಕಲಬುರಗಿಯಲ್ಲಿರುವ ಖಾಜಾ ಬಂದೆ ನವಾಜ್ ದರ್ಗಾದ ಉರುಸ್ ಗೆ ಕ್ರೂಸರ್ ನಲ್ಲಿ ತೆರಳುತ್ತಿದ್ದಾಗ ಈ ಭೀಕರ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಸೈದಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.