ಬೀದರ್ : ಯಾವುದೇ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಸಂವಿಧಾನ ಬದ್ದವಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು(ಮಾರ್ಚ್ 26) ಬೀದರ್ ಜಿಲ್ಲೆಗೆ ಭೇಟಿ ನೀಡಿದ್ದು, ಗೊರಟಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಯಾವುದೇ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಸಂವಿಧಾನ ಬದ್ದವಲ್ಲ, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ , ಈ ಮೀಸಲಾತಿಯನ್ನು ತೆಗೆದು ಸಂವಿಧಾನದ ಆಶಯ ಅನುಷ್ಟಾನ ಮಾಡುತ್ತಿದೆ. ಕಾಂಗ್ರೆಸ್ ಎಂದಿಗೂ ಕರ್ನಾಟಕಕ್ಕೆ ಅನುಕೂಲ ಮಾಡುವುದಿಲ್ಲ , ಕಾಂಗ್ರೆಸ್ ಗೆ ಕರ್ನಾಟಕ ಒಂದು ಎಟಿಎಂ ಆಗಬೇಕಾಗಿದೆ ಅಷ್ಟೇ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.
‘ಬಸವೇಶ್ವರರು ಅನುಭವ ಮಂಟಪದ ಮೂಲಕ ಸಂಸತ್ತನ್ನು ಮೊದಲು ಪರಿಚಯಿಸಿದರು. ಇದು ನನ್ನ ಜೀವನದ ಮಹತ್ವದ ದಿನ. ನಿಜಾಮನ ಕ್ರೂರ ಸೈನ್ಯ ಗೊರಟಾದಲ್ಲಿ ಅನೇಕರನ್ನು ಹತ್ಯ ಮಾಡಿತ್ತು. ಇಂದು ಇದೇ ಗ್ರಾಮದಲ್ಲಿ 103 ಅಡಿ ಎತ್ತರದಲ್ಲಿ ರಾಷ್ಟ್ರದ್ವಜ ಹಾರಾಡುತ್ತಿದೆ. ಹಿಂದೆ ಹೈದ್ರಾಬಾದ್ ಪ್ರಾಂತ್ಯವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದಲ್ಲಿ ವಿಲೀನಗೊಳಿಸಿದ್ದರು. ಇನ್ನು ಈ ಹಿಂದೆ ನಾನೇ ಗೊರಟಾ ಗ್ರಾಮದಲ್ಲಿ ಸ್ಮಾರಕದ ಶಂಕುಸ್ಥಾಪನೆ ಮಾಡಿದ್ದೆ, ಇಂದು ನಾನೇ ಉದ್ಘಾಟನೆ ಮಾಡಿದ್ದೇನೆ. ಗೊರಟ (ಬಿ) ಗ್ರಾಮದಲ್ಲಿ ಈ ಹುತಾತ್ಮರ ಸ್ಮಾರಕವನ್ನ ಐತಿಹಾಸಿಕ ಪ್ರವಾಸಿ ಸ್ಥಳವಾಗಿ ಅಭಿವೃದ್ದಿಪಡಿಸಿ. ಮುಂದಿನ ದಿನದಲ್ಲಿ 50 ಕೋಟಿ ವೆಚ್ಚದಲ್ಲಿ ಅದ್ದೂರಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.