ಕಾರ್ಕಳ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿಯವರ ರಾಜಕೀಯ ನಿವೃತ್ತಿ ಕುರಿತ ಹೇಳಿಕೆಯು ಕೇವಲ ಕಪಟ ನಾಟಕವಾಗಿದೆ,ನಿವೃತ್ತಿಯಾಗುವುದಾಗಿ ಹೇಳಿ ಯಾರಿಂದ ಎಷ್ಟೆಷ್ಟು ಹಣ ಸಂಗ್ರಹಿಸಿದ್ದೀರಿ ಎಂದು ಗೊತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಸವಾಲೆಸೆದಿದ್ದಾರೆ.
ಕಾರ್ಕಳ ಕ್ಷೇತ್ರದ ಜನತೆ ನನಗೆ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆಯೇ ಹೊರತು ರಾಜಿನಾಮೆ ನೀಡುವುದಕ್ಕಲ್ಲ ಎಂದು ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಉದಯ ಶೆಟ್ಟಿಯವರು ಅವಕಾಶವಾದಿ ರಾಜಕಾರಣಿಯಾಗಿದ್ದಾರೆ, ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದಾಗ ಅಲ್ಲಿ ಲಾಭ ಪಡೆದು ಬಳಿಕ ರಾಜಿನಾಮೆ ನೀಡಿ ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ಲಾಭ ಪಡೆದುಕೊಂಡಿಲ್ಲವೇ?,ಅಲ್ಲದೇ ಯಾರ ಲಾಭಕ್ಕಾಗಿ ಕಾಂಗ್ರೆಸ್ಸಿಗೆ ರಾಜಿನಾಮೆ ಕೊಟ್ಟಿದ್ದೀರಿ? ನಿಮ್ಮ ಸ್ವಂತಕೋಸ್ಕರ ಅಲ್ಲದೇ ಇನ್ಯಾವ ಕಾರಣಕ್ಕೆ ಎಂದು ಸುನಿಲ್ ಪ್ರಶ್ನಿಸಿದ್ದಾರೆ.
ರಾಜಕೀಯ ನಿವೃತ್ತಿಯ ಮಾತುಗಳನ್ನಾಡುವ ನಿಮ್ಮ ರಾಜಕೀಯ ನಿವೃತ್ತಿ ಎಷ್ಟು ಕಪಟ ಎನ್ನುವುದು ನನಗೆ ಗೊತ್ತು. ಕಳೆದ ಎರಡು ವರುಷಗಳ ಹಿಂದೆ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿಕೊಂಡು ರಾಜ್ಯದೆಲ್ಲೆಡೆ ಎಷ್ಟೆಷ್ಟು ಹಣ ಸಂಗ್ರಹಿಸಿದ್ದೀರಿ ಎನ್ನುವುದು ನನಗೆ ತಿಳಿದಿದೆ. ನೀವು ಬಯಸಿದ್ದಲ್ಲಿ ಅದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ನಾನು ಸಿದ್ದನಿದ್ದೇನೆ ಎಂದಿದ್ದಾರೆ.
ರಾಜಕಾರಣದಲ್ಲಿ ಬದ್ಧತೆಯಿಲ್ಲದ ವ್ಯಕ್ತಿ ನೀವು, ಸಮಯ, ಸಂದರ್ಭಕ್ಕೆ ಅನುಸಾರ ರಾಜಕೀಯವಾಗಿ ಲಾಭ ಪಡೆದುಕೊಳ್ಳುವ ನೀವು ಒಮ್ಮೆ ಕಾಂಗ್ರೆಸ್ ಇನ್ನೊಮ್ಮೆ ಬಿಜೆಪಿ ಬಾಗಿಲು ಕದ ತಟ್ಟಿ ಸ್ವಹಿತಾಸಕ್ತಿಯ ರಾಜಕಾರಣ ಮಾಡಿಕೊಂಡು ಬಂದು ಈಗ ಕಾಂಗ್ರೆಸ್ ಆಡಳಿತದಲ್ಲಿ ಇರುವ ಕಾರಣಕ್ಕೆ ಅಲ್ಲಿ ಲಾಭ ಪಡೆದು ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿಗೂ ಕಾಲಿಡುತ್ತೀರಿ. ಒಟ್ಟಾರೆ ನಿಮ್ಮ ಎಲ್ಲದರ ಉದ್ದೇಶ ಕೊನೆಯ ಅಂಶ ಸ್ವಂತ ಲಾಭವೇ ಹೊರತು ಸಾರ್ವಜನಿಕ ಹಿತಾಶಕ್ತಿಗಾಗಿ ಅಲ್ಲ.ನಿಮ್ಮ ರಾಜಕೀಯ ನಡೆಯ ಬಗ್ಗೆ ಕಾರ್ಕಳದ ಜನತೆಗೆ ಅರಿವಿದೆ. ಜೊತೆಗೆ ನಿಮ್ಮ ಇಂತಹ ನಡೆಯನ್ನು ಗಮನಹರಿಸುತ್ತಾರೆ ಎಂದಿದ್ದಾರೆ .
ಪರಶುರಾಮ ಥೀಂ ಪಾರ್ಕ್ ನ ವಿಗ್ರಹ ಗುಣಮಟ್ಟದ ಕೊರತೆ ಆಗಿದ್ದರೆ ಜಿಲ್ಲಾಧಿಕಾರಿ ಕ್ರಮವಹಿಸುತ್ತಾರೆ. ತನಿಖೆಗೆ ಒಪ್ಪಿಸುತ್ತಾರೆ. ಯಾವ ರೀತಿಯ ತನಿಖೆ ಬೇಕಾದರೂ ನಡೆಯಲಿ ನನ್ನ ಸಹಕಾರವಿದೆ. ಅದರ ಗುತ್ತಿಗೆದಾರ ನಾನಲ್ಲ.ಗುಣಮಟ್ಟದಲ್ಲಿ ಲೋಪವಾದರೇ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸಲಿ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಯಾವ ರೀತಿ ತನಿಖೆ ನಡೆಯುತ್ತದೆ ಎನ್ನುವ ಕನಿಷ್ಠ ಜ್ಞಾನ ಗುತ್ತಿಗೆದಾರನಾದ ನಿಮಗೆ ಇರಬೇಕಲ್ಲವೇ?ಒಂದು ಕಾಮಗಾರಿ ಪೂರ್ಣಗೊಂಡ ಬಳಿಕ ಗುಣಮಟ್ಟ ಇತ್ಯಾದಿಗಳ ಕುರಿತು ತನಿಖೆ ನಡೆಸುವುದು. ಅದು ಬಿಟ್ಟು ಕಾಮಗಾರಿ ಪೂರ್ಣವಾಗುವ ಮೊದಲೇ ಗುಣಮಟ್ಟದ ನೆಪದಲ್ಲಿ ಕಾಮಗಾರಿ ಪೂರ್ಣಕ್ಕೆ ಅಡ್ಡಿಪಡಿಸುತ್ತಿದ್ದೀರಿ. ಗುಣಮಟ್ಟದ ನೆಪದಲ್ಲಿ ಕಾಮಗಾರಿಗೆ ಅಡ್ಡಿ ಪಡಿಸುವುದರ ನಿಮ್ಮ ಉದ್ದೇಶವಾದರೂ ಏನು? ಮೂರ್ತಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ವೀಕ್ಷಣೆಗೆ ಶೀಘ್ರ ಸಿಗುವಂತಾಗಬೇಕು. ನಾಡಿನ ಜನ ಬೆಟ್ಟಕ್ಜೆ ಬರುವಂತಾಗಬೇಕು ಎಂದಿದ್ದಾರೆ.
ಗೋಮಾಳ ಜಾಗದಲ್ಲಿ ಕಾಂಗ್ರೆಸ್ ವ್ಯಕ್ತಿ ಕ್ರಶರ್ ನಡೆಸುತಿದ್ದಾಗ ಎಲ್ಲಿ ಹೋಗಿದ್ಧೀರಿ?
ಪ್ರತಿಮೆ ನಿರ್ಮಾಣಗೊಂಡ ಸ್ಥಳ ಗೋಮಾಳ ಎನ್ನುವ ನೀವು ಅದೇ ಸ್ಥಳದಲ್ಲಿ ಈ ಹಿಂದೆ ಕಾಂಗ್ರೆಸ್ ವ್ಯಕ್ತಿಗಳೇ ಕ್ರಶರ್ ನಡೆಸುತಿದ್ದಾಗ ನೀವು ಎಲ್ಲಿ ಹೋಗಿದ್ದಿರಿ ಎಂದು ಪ್ರಶ್ನಿಸಿದ ಸುನಿಲ್ ಕುಮಾರ್,ಉಮಿಕ್ಕಳ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿಸಿ ಸಾರ್ವಜನಿಕ ಬಳಕೆಗೆ ಬಳಸಿದಾಗ ಅಪಸ್ವರ ಎತ್ತುತ್ತೀರಿ. ಕಾರ್ಕಳ ಪ್ರವಾಸಿ ಕ್ಷೇತ್ರವಾಗಿ ಬೆಳೆದು ಉಮಿಕ್ಕಳ ಬೆಟ್ಟ ಅಭಿವೃದ್ದಿ ಹೊಂದಿ ಕಾರ್ಕಳ ಕ್ಷೇತ್ರದ ಜನ ಆರ್ಥಿಕವಾಗಿ ಬೆಳೆಯುವುದು ನಿಮಗೆ ಬೇಕಿಲ್ಲ. ತಂಡ ಕಟ್ಟಿಕೊಂಡು ಟೀಕೆಗಳಲ್ಲೇ ತೊಡಗಿಸಿಕೊಂಡು ಕ್ಷೇತ್ರದ ಹೆಸರು ಹಾಳು ಗೆಡವುತ್ತಿದ್ದೀರಿ. ರಾಜಕಾರಣ ಮಾಡುವುದಕ್ಕೆ ಸಾಕಷ್ಟು ವಿಚಾರವಿದೆ. ಅಭಿವೃದ್ಧಿ ವಿಚಾರದಲ್ಲಿ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.