ಬೆಂಗಳೂರು:ರಾಜ್ಯದಲ್ಲಿ ವಿದ್ಯುತ್ ಕೊರತೆಯಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಪ್ಪಿಕೊಂಡರೂ ಸಹ ವಿದ್ಯುತ್ ಸರಬರಾಜನ್ನು ಸಹಜ ಸ್ಥಿತಿಗೆ ತರಲು ಸರ್ಕಾರ ವಿಫಲವಾಗಿದೆ,ಈ ಹಿನ್ನಲೆಯಲ್ಲಿ ಎಸ್ಕಾಂಗಳಿಗೆ ಮುತ್ತಿಗೆ ಹಾಕಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ಈ ಕುರಿತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ,ಜನರಿಗೆ ಉಚಿತ ವಿದ್ಯುತ್ ನೆಪದಲ್ಲಿ ದರ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಜತೆಗೆ ಬೇಕಾಬಿಟ್ಟಿ ವಿದ್ಯುತ್ ಕಡಿತದಿಂದ ರೈತರು, ಕೈಗಾರಿಕಾ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.ವಿದ್ಯುತ್ ಕೊರತೆಯಿಂದ ರಾಜ್ಯದ ಜನ ಪರದಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಆದ್ದರಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದರು.
ವಿದ್ಯುತ್ ಕೊರತೆ ಒಪ್ಪಿಕೊಂಡ ಡಿಕೆ ಶಿವಕುಮಾರ್
ವಿದ್ಯುತ್ ಕೊರತೆಯನ್ನು ಒಪ್ಪಿಕೊಂಡಿರುವ ಡಿಕೆ ಶಿವಕುಮಾರ್,ಬಿಜೆಪಿ ಅಧಿಕಾರದಲ್ಲಿದ್ದಾಗ ವಿದ್ಯುತ್ ಉತ್ಪಾದನೆಯನ್ನು ಏಕೆ ಹೆಚ್ಚಿಸಲಿಲ್ಲಎಂದು ಪ್ರಶ್ನಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದಾಗಿ ವಿದ್ಯುತ್ ಕೊರತೆ ಎದುರಾಗಿದೆ. ಇಂಧನ ಸಚಿವ ಕೆಜೆ ಜಾರ್ಜ್ ಅವರು ಕೇಂದ್ರ ವಿದ್ಯುತ್ ಸಚಿವರನ್ನು ಭೇಟಿ ಮಾಡಿ ಕೇಂದ್ರ ಗ್ರಿಡ್‌ನಿಂದ ವಿದ್ಯುತ್ ಪೂರೈಕೆಗೆ ಮನವಿ ಮಾಡಿದ್ದಾರೆ.
ನಾನು ಇಂಧನ ಸಚಿವನಾಗಿದ್ದಾಗ 12 ಸಾವಿರ ಮೆಗಾವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಗೆ ಕ್ರಮವಹಿಸಲಾಗಿತ್ತು, ಆದರೆ ಬಿಜೆಪಿ ಆಡಳಿತವಿದ್ದಾಗ ಯಾವುದೇ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿಲ್ಲ, ಸಾಮಾನ್ಯವಾಗಿ, ಪ್ರತೀವರ್ಷ 10ರಿಂದ15 ರಷ್ಟು ಬೆಳವಣಿಗೆ ಇರುತ್ತದೆ. ಅವರ ಸರ್ಕಾರ ವಿದ್ಯುತ್ ಮಾರಾಟ ಮಾಡಿತ್ತು, ಈಗ ಬರಗಾಲ ಎದುರಾಗಿದ್ದು, ಜನರು ತುಂಬಾ ಕಷ್ಟಪಡುತ್ತಿದ್ದಾರೆ ಎಂದು ಡಿಕೆಶಿ ಬಿಜೆಪಿ ವಿರುದ್ಧ ಹರಿಹಾಯ್ದರು.