Share this news

ಬೆಂಗಳೂರು: ರಾಜ್ಯದಲ್ಲಿ ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆಗೆ ನಿಗದಿಪಡಿಸಿರುವ ಗಡುವನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಸದ್ಯದಲ್ಲೇ ಆದೇಶ ಹೊರಡಿಸಲಿದೆ.

2023ರ ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆಯು ರಾಜ್ಯದಲ್ಲಿ 2019ರ ಏ.1ಕ್ಕೂ ಮುನ್ನ ನೋಂದಣಿಯಾದ ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ನವೆಂಬರ್ 17ರವರೆಗೆ ಕಾಲಾವಕಾಶ ನೀಡಿತ್ತು. ರಾಜ್ಯದಲ್ಲಿಅಂತಹ ಸುಮಾರು 2 ಕೋಟಿ ವಾಹನಗಳಿದ್ದು, ನವೆಂಬರ್ 17 ರ ಗಡುವಿನೊಳಗೆ ಬಹುತೇಕ ಹಳೆ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬಹುದೆಂದು ಇಲಾಖೆ ನಿರೀಕ್ಷಿಸಿತ್ತು. ಆದರೆ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ.

ರಾಜ್ಯದ ಶೇ.9 ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಫೆಬ್ರವರಿ 17 ರವರೆಗೆ ಗಡುವು ವಿಸ್ತರಿಸುವಂತೆ ಸೂಚಿಸಿದ್ದರು. ಅದರಂತೆ ಸಾರಿಗೆ ಇಲಾಖೆಯು ಫೆಬ್ರವರಿ 17 ರವರೆಗೆ ಗಡುವು ವಿಸ್ತರಿಸಿತ್ತು. ಆ ನಂತರವೂ ಸಾರ್ವಜನಿಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಹಿಂದೇಟು ಹಾಕಿದ್ದು, 2 ಕೋಟಿ ಹಳೆ ವಾಹನಗಳಲ್ಲಿ ಈವರೆಗೆ ಸುಮಾರು 18.5 ಲಕ್ಷ ವಾಹನಗಳಿಗೆ ಅಂದರೆ ಶೇ.9 ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ.ಇದಕ್ಕೆ ತಾಂತ್ರಿಕ ಸಮಸ್ಯೆಗೂ ಅಡ್ಡಿಯಾಗಿದ.
ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಕೋರಿಕೆ ಸಲ್ಲಿಸುವ ವೆಬ್ ಪೋರ್ಟಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಮತ್ತೊಮ್ಮೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವು ವಿಸ್ತರಿಸುವಂತೆ ಸಾರ್ವಜನಿಕರು ಹಾಗೂ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಸದಸ್ಯರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಗಡುವು ವಿಸ್ತರಿಸಲು ನಿರ್ಧರಿಸಿದೆ. ಈ ಮೊದಲು ಫೆ.17ರ ಗಡುವಿನೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳಿಗೆ 1 ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಗಡುವು ವಿಸ್ತರಣೆ ಮಾಡಲಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ದಂಡ ವಿಧಿಸದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ನಕಲಿಗಳ ಹಾವಳಿಯಿಂದ ಎಚ್ಚರವಿರಿ:
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಮಾಲೀಕರು ಮುಗಿ ಬೀಳುತ್ತಿದ್ದಂತೆ ಅದರ ಲಾಭ ಪಡೆದುಕೊಳ್ಳಲು ಆನ್‌ಲೈನ್ ವಂಚಕರ ಹಾವಳಿ ಕೂಡ ಹೆಚ್ಚಾಗಿದೆ. ಗೂಗಲ್ ಸರ್ಚ್ನಲ್ಲಿ ಎಚ್‌ಎಸ್‌ಆರ್‌ಪಿ ಎಂದು ಟೈಪ್ ಮಾಡಿದಾಗ ಬರುವ ಪೋರ್ಟಲ್‌ಗಳನ್ನು ನಂಬಿ ಹಲವರು ಹಣ ಕಳೆದುಕೊಂಡಿದ್ದಾರೆ. ಈ ರೀತಿಯ ದೂರುಗಳನ್ನೂ ಹೊತ್ತು ಜನ ಕಚೇರಿಗೆ ಬರುತ್ತಿದ್ದಾರೆ. ಆದ್ದರಿಂದ ಎಸ್‌ಐಎಎಂ ವೆಬ್‌ಸೈಟ್ ಅಡಿಯಲ್ಲಿರುವ ಅಧಿಕೃತ ಪೋರ್ಟಲ್‌ಗಳನ್ನೇ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Leave a Reply

Your email address will not be published. Required fields are marked *