Share this news

ಬೆಂಗಳೂರು: ರಾಜ್ಯದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ.

ಕಳೆದ ವರ್ಷ ಐದನೇ ಮತ್ತು ಎಂಟನೇ ತರಗತಿಗೆ ಮೌಲ್ಯಂಕನ ಪರೀಕ್ಷೆ ಪ್ರಾರಂಭಿಸಿದ್ದ ಸರಕಾರ ಈಗ 9ನೇ ತರಗತಿ ವಿದ್ಯಾರ್ಥಿಗಳಿಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ವಿಸ್ತರಿಸಿರಿದೆ. ಹಾಗೆಯೇ 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಿದೆ . ಪರೀಕ್ಷೆಯು ಶಾಲಾ ಮತ್ತು ಕಾಲೇಜು ಹಂತದಲ್ಲಿಯೇ ನಡೆಯಲಿದ್ದು ಆಯ ವಿದ್ಯಾರ್ಥಿಗಳು ಓದುತ್ತಿರುವ ಶಾಲಾ-ಕಾಲೇಜುಗಳೇ ಅವರ ಪರೀಕ್ಷಾ ಕೇಂದ್ರವಾಗಿರಲಿದೆ. ಪ್ರಶ್ನೆ ಪತ್ರಿಕೆ ರಾಜ್ಯ ಮಟ್ಟದಲ್ಲಿ ತಯಾರಾಗಲಿದೆ.

9ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನದ ಪ್ರಶ್ನೆ ಪತ್ರಿಕೆಗಳನ್ನು ಕೆ ಎಸ್ ಇ ಎ ಬಿ ಯು ಸಿದ್ದಪಡಿಸಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ ಗೆ ಕಳುಹಿಸಿಕೊಡಲಿದೆ. ಅದೇ ರೀತಿ 11ನೇ ತರಗತಿಯ ಪ್ರಶ್ನೆ ಪತ್ರಿಕೆಯನ್ನು ಪಿಯು ಪರೀಕ್ಷೆ ವಿಭಾಗದಿಂದ ಸಿದ್ಧಪಡಿಸಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಜಿಲ್ಲಾ ಉಪ ನಿರ್ದೇಶಕರ ಲಾಗಿನ್ ಗೆ ಕಳುಹಿಸಿಕೊಡಲಾಗುತ್ತದೆ. 9ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನ ಸಂದರ್ಭದಲ್ಲಿ ಸಮೀಪದ ಶಾಲೆಗಳ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಬೇಕು. 11ನೇ ತರಗತಿ ಪರೀಕ್ಷೆಗೆ ಆಯಾ ಕಾಲೇಜಿನ ಉಪನ್ಯಾಸಕರನ್ನೇ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಬೇಕು. ಹಾಗೂ 9ನೇ ತರಗತಿ ಸಂಕಲನಾತ್ಮಕ ಮೌಲ್ಯಮಾಪನವನ್ನು ತಾಲೂಕು ಹಂತದಲ್ಲಿ ನಡೆಸಲು ಸೂಚಿಸಲಾಗಿದೆ.

ಅಲ್ಲದೆ ಒಂಭತ್ತನೇ ತರಗತಿಯ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ. ಫಲಿತಾಂಶವನ್ನು ವಿದ್ಯಾರ್ಥಿ ಮತ್ತು ಪೋಷಕರಿಗೆ ಮಾತ್ರ ತಿಳಿಸಬೇಕು. 11ನೇ ತರಗತಿ ವಿದ್ಯಾರ್ಥಿ ಅನುತ್ತೀರ್ಣಗೊಂಡರೆ ಪೂರಕ ಪರೀಕ್ಷೆಯನ್ನು ಆಯಾ ಕಾಲೇಜು ಹಂತದಲ್ಲೇ ನಡೆಸಬೇಕು ಹಾಗೂ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನವನ್ನು ಸಂಬಂಧಿಸಿದ ಕಾಲೇಜಿನಲ್ಲಿ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.

 

Leave a Reply

Your email address will not be published. Required fields are marked *