ಬೆಂಗಳೂರು :ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಸುದ್ದಿ ಹೊಸ ಸಂಚಲನ ಮೂಡಿಸಿದ್ದು, ಶೋಭಾ ಕರಂದ್ಲಾಜೆ ನೇಮಕವಾದರೆ ಮೊದಲ ಬಾರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಅಧಿಕಾರ ವಹಿಸಿಕೊಂಡಂತಾಗುತ್ತದೆ.
ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹೈಕಮಾಂಡ್ ಈಗಾಗಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದು, ಶೀಘ್ರದಲ್ಲೇ ನಿರ್ಧಾರ ಮಾಡುವ ಸಾಧ್ಯತೆ ಇದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದರೆ ಬಿಎಸ್ ಯಡಿಯೂರಪ್ಪ ಪಾತ್ರ ಮುಖ್ಯವಾಗುತ್ತದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಪರಿಗಣಿಸುವಂತೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲಾ ರೀತಿಯಿಂದಲೂ ಚಿಂತನೆ ಮಾಡಿರುವ ಬಿಜೆಪಿ ಹೈಕಮಾಂಡ್ ಶೋಭಾ ಕರಂದ್ಲಾಜೆ ನೇಮಿಸಿದರೆ ಹೆಚ್ಚಿನ ವಿರೋಧ ಇರುವುದಿಲ್ಲ ಎನ್ನುವ ಲೆಕ್ಕಾಚಾರಕ್ಕೆ ಬಂದಿದೆ. ಬಿಎಸ್‌ವೈ ಕೂಡ ಶೋಭಾ ಅವರ ನೇಮಕಕ್ಕೆ ಒಮ್ಮತ ಮೂಡಬಹುದು ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡಲು ಆಸಕ್ತಿ ಹೊಂದಿದೆ ಎಂದು ವರದಿಗಳು ಹೇಳಿವೆ.
ಇನ್ನು ಕೆಲವು ವರದಿಗಳ ಪ್ರಕಾರ, ಸದ್ಯ ಬಸವರಾಜ ಬೊಮ್ಮಾಯಿ ಅವರು ಶಸ್ತ್ರಚಿಕಿತ್ಸೆಗ ಒಳಗಾಗಿದ್ದು, ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ವಿಪಕ್ಷ ನಾಯಕ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಿದ್ದವು. ಅದೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವೆ ಶೋಭಾ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳು ಸಿಗಬಹುದು ಎನ್ನುವ ಲೆಕ್ಕಾಚಾರ ಹೈಕಮಾಂಡ್‌ದ್ದಾಗಿದೆ ಎನ್ನಲಾಗಿದೆ.