ಬೆಳಗಾವಿ: ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ಬೆನ್ನಲ್ಲೇ ವಕೀಲ ಸಮುದಾಯದ ಬಹುನಿರೀಕ್ಷಿತ ವಕೀಲರ ಸಂರಕ್ಷಣಾ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಈ ವಿಧೇಯಕ ಅಂಗೀಕಾರಗೊಂಡಲ್ಲಿ, ವಕೀಲರಿಗೆ ಕಾನೂನು ಸಂರಕ್ಷಣೆ ಸಿಗಲಿದ್ದು, ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ ಗರಿಷ್ಠ 3 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಧಿಸುವ ಅವಕಾಶ ಇದೆ. 2023ನೇ ಸಾಲಿನ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ವಕೀಲರ ಮೇಲೆ ಹಲ್ಲೆ ತಡೆಯುವ ನಿಟ್ಟಿನಲ್ಲಿ ಈ ವಿಧೇಯಕವನ್ನು ತರಲಾಗಿದೆ.
ಮಸೂದೆಯಲ್ಲಿನ ಪ್ರಮುಖ ಅಂಶಗಳೇನು?
ವಕೀಲರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ 6 ತಿಂಗಳಿಂದ 3 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಸುವ ಅವಕಾಶವನ್ನು ವಿಧೇಯಕದಲ್ಲಿ ಕಲ್ಪಿಸಲಾಗಿದೆ. ಪೊಲೀಸರು ಯಾವುದೇ ಒಬ್ಬ ವಕೀಲರನ್ನು ಬಂಧಿಸಿದರೆ 24 ಗಂಟೆಯೊಳಗಾಗಿ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು. ಬೆದರಿಕೆ, ಕೆಲಸಕ್ಕೆ ಅಡ್ಡಿ, ಕಿರುಕುಳ ನೀಡಿದರೆ ಶಿಕ್ಷೆ ಇದೆ. ಇನ್ನು ದೇಶ- ವಿದೇಶದಲ್ಲಿ ಮುಕ್ತವಾಗಿ ಪ್ರಯಾಣಿಸಲು ಹಾಗೂ ಕಕ್ಷಿದಾರರೊಂದಿಗೆ ಸಮಾಲೋಚಿಸಲು ವಿಧೇಯಕದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಈ ಕಾನೂನು ಜಾರಿಗೆ ತರುವಂತೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕೀಲರಿಂದ ಭಾರೀ ಪ್ರತಿಭಟನೆಗಳು ನಡೆದಿದ್ದವು.
ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕರ್ನಾಟಕ ವಕೀಲರ ಸಂಘ ಮನವಿ ಮಾಡಿತ್ತು.ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ 10ನೇ ರಾಜ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಕೀಲರ ಸಂರಕ್ಷಣಾ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು.