ಕುಂದಾಪುರ :ಉದ್ಯಮಿಯೋರ್ವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ನಾಯಕ್ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಚೈತ್ರಾ ಸಹಿತ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಉಡುಪಿ ಬಿಜೆಪಿ ಮುಖಂಡ, ಉದ್ಯಮಿ ಬೈಂದೂರಿನ ಗೋವಿಂದ ಬಾಬು ಪೂಜಾರಿ ಅವರಿಗೆ ಬೈಂದೂರಿನ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 3.5 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬೆಂಗಳೂರಿನ ಬಂಡೀಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೀಗ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಸಿಬಿ ಚೈತ್ರಾ ಕುಂದಾಪುರ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಚೈತ್ರಾ ಕುಂದಾಪುರ ಸೇರಿದಂತೆ ಒಟ್ಟು 8 ಮಂದಿಯ ವಿರುದ್ದ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣ ದಾಖಲಾದ ಬೆನ್ನಲ್ಲೇ ಚೈತ್ರಾ ಕುಂದಾಪುರ ತಲೆ ಮರೆಸಿಕೊಂಡಿದ್ದಳು. ಆಕೆ ಉಡುಪಿಯ ತನ್ನ ಆತ್ಮೀಯ ಗೆಳತಿಯ ಮನೆಯಲ್ಲಿ ಉಳಿದುಕೊಂಡಿದ್ದಾಳೆ ಎನ್ನುವ ಮಾಹಿತಿ ಕಲೆಹಾಕಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಉದ್ಯಮಿ ಆಗಿರುವ ಗೋವಿಂದ ಬಾಬು ಪೂಜಾರಿ ಅವರು ಕಳೆದ ಬಾರಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡ ಟಿಕೆಟ್ ನೀಡುವ ನಾಟಕವಾಡಿ ಹಣ ಪಡೆದಿದ್ದರು ಎನ್ನುವ ಆರೋಪವಿತ್ತು.

ನಕಲಿ ಆರ್‌ಎಸ್‌ಎಸ್ ನಾಯಕನನ್ನು ಸೃಷ್ಟಿಸಿದ್ದ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡ ಹಂತ ಹಂತವಾಗಿ ಸುಮಾರು 3.50 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿತ್ತು ಎಂದು ಆರೋಪಿಸಲಾಗಿದೆ. ಆದರೆ ಚುನಾವಣೆ ಘೋಷಣೆಯಾದರೂ ಕೂಡ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ದೊರಕಿರಲಿಲ್ಲ. ಇದರ ಬೆನ್ನಲ್ಲೇ ಉದ್ಯಮಿ ವಂಚಕರ ವಿರುದ್ದ ದೂರು ನೀಡಿದ್ದರು.

