ಕಾರ್ಕಳ: ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಅವರ ಮೇಲೆ ಅನುಕಂಪ ತೋರಿಸಿ, ಸಾರ್ವಜನಿಕರ ಮನಸ್ಸನ್ನು ಗೆಲ್ಲಲು ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ನಡೆಸುತ್ತಿರುವ ಪ್ರಯತ್ನ, ಕೇವಲ ಚುನಾವಣೆ ಗಿಮಿಕ್ ಹೊರತು ಈ ವಿಚಾರದಲ್ಲಿ ಯಾವುದೇ ಸತ್ಯಾಂಶ ಇಲ್ಲ. ವೈಯಕ್ತಿಕ ದ್ವೇಷ ಹಾಗೂ ವ್ಯಕ್ತಿ ನಿಂದನೆ ರಾಜಕಾರಣದ ರೂವಾರಿ ಸುನಿಲ್ ಕುಮಾರ್ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಆರೋಪಿಸಿದ್ದಾರೆ.
2004ರ ಚುನಾವಣೆಯಲ್ಲಿ ಹೆಬ್ರಿಯ ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ಮಾಜಿ ಶಾಸಕರ ಕುಟುಂಬಿಕರ ಮೇಲೆ ಹೊರಿಸಿ, ಚುನಾವಣೆ ಗೆದ್ದಿದ್ದರು. ಗೆದ್ದ ನಂತರ ಆರೋಪಿಗಳಿಗೆ ಪರೋಕ್ಷ ರಕ್ಷಣೆ ನೀಡಿದಂತೆ ಈ ಕೊಲೆ ಪ್ರಕರಣಕ್ಕೆ ಬಿ-ರಿಪೋರ್ಟ್ ಹಾಕಿಸಿ ಪ್ರಕರಣಕ್ಕೆ ಅಂತ್ಯ ಹಾಡಿದ್ದರು. ಮುಂದೆ ನೊಂದ ಸಂತ್ರಸ್ತ ಕುಟುಂಬದ ಕಡೆ ಮುಖ ಮಾಡದೆ ರಾಜಕೀಯ ಬೇಳೆ ಬೇಯಿಸಿಕೊಂಡ ಶಾಸಕರು ಅಂದಿನ ಚುನಾವಣೆ ಸಂದರ್ಭ ಎಚ್.ಗೋಪಾಲ ಭಂಡಾರಿ ಅವರ ಕುಟುಂಬಿಕರಿAದಲೇ ಈ ಕೊಲೆ ನಡೆದಿದೆ ಎಂದು ಆರೋಪಿಸಿ, ಆ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವುದನ್ನು ಅವರ ಪತ್ನಿ ಮಕ್ಕಳು ಮತ್ತು ಕುಟುಂಬಿಕರು ಇಂದಿಗೂ ಮರೆತಿಲ್ಲ. ಮುಂದೆಯೂ ಮರೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಎಚ್.ಗೋಪಾಲ ಭಂಡಾರಿ ಅವರ ತಾಯಿ ಗಿರಿಜಾ ಭಂಡಾರಿ ಅವರು ಕೃಷಿಕರಾಗಿದ್ದು, ಫಲಾನುಭವಿಯಾಗಿ ಸಹಜವಾಗಿ ಸರಕಾರದಿಂದ 30 ಸಾವಿರ ರೂ.ನ ಟಿಲ್ಲರ್ ಪಡೆದಾಗ ಅಲ್ಲಿಯೂ ಅಪಪ್ರಚಾರ ನಡೆಸಿ ಮಾನಸಿಕ ಕಿರುಕುಳ ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಹೆಬ್ರಿಯಲ್ಲಿ 12 ಲಕ್ಷ ರೂ. ಮನೆ ನಿರ್ಮಾಣ ಮಾಡಿದಾಗ, ಹಿಂದೆ ಹೆಬ್ರಿ ಪೇಟೆಯಲ್ಲಿ 1 ಸೆಂಟ್ಸ್ ಕಮರ್ಷಿಯಲ್ ಸೈಟ್ ಪಡೆದುಕೊಂಡಿರುವುದನ್ನು ಕೂಡಾ ಅಪಪ್ರಚಾರದ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಅವರ ತಾಯಿ ಗಿರಿಜಾ ಭಂಡಾರಿ ಅವರು ಆಕಸ್ಮಿಕವಾಗಿ ಅಗಲಿದ ಸಂದರ್ಭ, ಅವರ ತಾಯಿಯ ಸಾವಿಗೂ ಮಾಜಿ ಶಾಸಕರೇ ಕಾರಣ ಎಂದು 2013ರ ಸಂದರ್ಭದಲ್ಲೂ ಚುನಾವಣೆ ಪ್ರಚಾರ ನಡೆಸಿ, ಗೆಲುವು ಸಾಧಿಸಿದ್ದರು.
ಹೀಗೆ ಒಂದಲ್ಲಾ ಒಂದು ಸುಳ್ಳು ಆರೋಪವನ್ನು ಮಾಡುತ್ತಾ, ಪ್ರಚಾರ ಗಿಟ್ಟಿಸಿಕೊಂಡು ನಿರಂತರ ಮಾಜಿ ಶಾಸಕರ ಕುಟುಂಬವನ್ನು ಕಣ್ಣೀರಿನಲ್ಲಿ ತೇಲುವಂತೆ ಮಾಡಿದ ಶಾಸಕರು, ಮುಂದೆ ಮಾಜಿ ಶಾಸಕರು ನಮ್ಮ ಜೊತೆ ಇಲ್ಲ ಎಂದಾಗ, ಅನುಕಂಪವನ್ನು ವ್ಯಕ್ತಪಡಿಸಿ ಪ್ರಚಾರದ ಅಸ್ತ್ರವನ್ನಾಗಿಸುತ್ತಿರುವುದನ್ನು ಈ ಕ್ಷೇತ್ರದ ಪ್ರಜ್ಞಾವಂತ ಮತದಾರರುಖಂಡಿತಾ ಒಪ್ಪುವುದಿಲ್ಲ. ಕಾರ್ಕಳದಲ್ಲಿ ದ್ವೇಷ ಮತ್ತು ವ್ಯಕ್ತಿ ನಿಂದನೆಯ ರಾಜಕಾರಣದ ರೂವಾರಿಯಾದ ಸುನಿಲ್ ಕುಮಾರ್‌ಗೆ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿಯವರು ಬಲಿಪಶು ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಶಾಸಕರು ಕಾರ್ಕಳ ಕ್ಷೇತ್ರಾದ್ಯಂತ ಭ್ರಷ್ಟಾಚಾರ, ಬೇನಾಮಿ ಆಸ್ತಿ ಗಳಿಕೆ ಹಾಗೂ ದುರ್ನಡತೆಯಿಂದ ಮತದಾರರ ನಂಬಿಕೆಯನ್ನು ಕಳೆದುಕೊಂಡು ಹತಾಶರಾಗಿದ್ದಾರೆ. ಸೋಲಿನ ಭೀತಿಯಿಂದ ಮಾಜಿ ಶಾಸಕರ ಮೇಲೆ ಹೊರಿಸಿದ್ದ ಇಲ್ಲಸಲ್ಲದ ಆರೋಪಗಳ ತಪ್ಪಿನ ಅರಿವಾಗಿ ಪಶ್ಚತ್ತಾಪಪಟ್ಟು ತಪ್ಪನ್ನು ತಿದ್ದುವ ಪ್ರಯತ್ನಕ್ಕೆ ಈ ನಾಟಕ ಮುಂದುವರೆಸಿದ್ದಾರೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಇತ್ತೀಚೆಗೆ ಸಾಣೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷರೊಬ್ಬರು, ಸಾಮಾಜಿಕ ಜಾಲತಾಣದಲ್ಲಿ ಗೋಪಾಲ ಭಂಡಾರಿಯವರ ಜಾತಿ ಕಸುಬನ್ನು ಅವಹೇಳನ ಮಾಡಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳುವ ತಾಕತ್ತು ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಭ್ರಷ್ಟಾಚಾರ ಮತ್ತು ದುರಹಂಕಾರ ಕೊನೆಗೊಳಿಸುವ ಉದ್ದೇಶದಿಂದ ಈಗ ನಿಮ್ಮದೇ ಪಕ್ಷವನ್ನು ಕಟ್ಟಿ ಬೆಳೆಸಿದ ಪ್ರಮೋದ್ ಮುತಾಲಿಕ್ ಮತ್ತು ಮಮತಾ ಹೆಗ್ಡೆ ಅವರು ಕಾರ್ಕಳದಿಂದಲೇ ಸ್ಪರ್ಧಿಸುತ್ತಿದ್ದಾರೆ. ನಿಮ್ಮ ವರ್ತನೆಯಿಂದ ಬೇಸತ್ತ ಕಾರ್ಯಕರ್ತರ ರಕ್ಷಣೆಗಾಗಿ ನಿಮ್ಮ ಗುರುಗಳು ನಿಮ್ಮ ಭ್ರಷ್ಟಾಚಾರದ ಕುರಿತು ದಾಖಲೆ ಸಹಿತ ಬಿಡುಗಡೆ ಮಾಡುತ್ತಿದ್ದರೂ, ನೀವು ಮೌನರಾಗಿರುವುದು ನಿಮ್ಮ ಸಮ್ಮತಿಯ ಲಕ್ಷಣವಾಗಿದೆ. ಸರಕಾರದ ಸಿಮೆಂಟ್ ನೀವು ಕದ್ದಿದ್ದೀರಿ ಎಂದು ನಿಮ್ಮದೇಕಾರ್ಯಕರ್ತರ ಬಹಿರಂಗವಾಗಿ ವೇದಿಕೆಯಲ್ಲಿ ಹೇಳಿಕೊಳ್ಳುತ್ತಿದ್ದರೂ, ಅದಕ್ಕೂ ಸಮರ್ಥವಾದ ಪ್ರತಿಕ್ರಿಯೆ ಯಾಕೆ ನೀಡುತ್ತಿಲ್ಲ ಎಂದು ಶುಭದ ರಾವ್ ಪ್ರಶ್ನಿಸಿದ್ದಾರೆ.