ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಸಂಭವಿಸಿದ ಭಾರಿ ಭದ್ರತಾ ಲೋಪ ಪ್ರರಕಣಕ್ಕೆ ಸಂಬಂಧಿಸಿದಂತೆ ಕನಿಷ್ಠ 8 ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂದರ್ಶಕರ ಗ್ಯಾಲರಿಯಲ್ಲಿದ್ದ ಇಬ್ಬರು ಆರೋಪಿಗಳು ಸಂಸದರ ಬಳಿ ಜಿಗಿದು ಹಳದಿ ಬಣ್ಣದ ಹೊಗೆ ಬಾಂಬ್ ಸಿಡಿಸಿದ್ದು, ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ 8 ಲೋಕಸಭಾ ಸಿಬ್ಬಂದಿಯನ್ನು ಗುರುವಾರ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇಬ್ಬರು ಆರೋಪಿಗಳು ಬುಧವಾರ ಲೋಕಸಭೆಯ ಸಭಾಂಗಣಕ್ಕೆ ಜಿಗಿದು ಹಳದಿ ಹೊಗೆಯನ್ನು ಹೊರಸೂಸುವ ಎರಡು ಡಬ್ಬಿಗಳನ್ನು ಎಸೆದಿದ್ದರು. ಈ ಪೈಕಿ ಒಬ್ಬ ಸ್ಪೀಕರ್ ಕುರ್ಚಿಯತ್ತ ಓಡಲು ಟೇಬಲ್‌ಗಳ ಮೇಲೆ ಹಾರಿದ್ದ, ಸಂಸತ್ತಿನ ಹೊರಗೆ ಸಹ ಇತರ ಇಬ್ಬರು ಇದೇ ರೀತಿಯ ಕೆಂಪು ಮತ್ತು ಹಳದಿ ಬಣ್ಣದ ಹೊಗೆ ಬಾಂಬ್‌ಗಳನ್ನು ಸಿಡಿಸಿದ್ದು,
ಸರ್ವಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದ್ದು, ಸಾಗರ್ ಶರ್ಮಾ, ಡಿ. ಮನೋರಂಜನ್, ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿ ಕೇಸ್ ದಾಖಲಿಸಲಾಗಿದೆ.
ಲೋಕಸಭೆಯೊಳಗೆ ಗದ್ದಲ ಪ್ರಾರಂಭವಾದಾಗ ಹಲವಾರು ಸಂಸದರು ಕಲಾಪದೊಳಗೆ ನುಗ್ಗಿದವರನ್ನು ಸುತ್ತುವರೆದರು. ಈ ನಾಲ್ವರು ಆರೋಪಿಗಳು ವಿವಿಧ ರಾಜ್ಯಗಳಿಂದ ಬಂದವರು ಮತ್ತು ಕಳೆದ 18 ತಿಂಗಳುಗಳಲ್ಲಿ ಹಲವಾರು ಬಾರಿ ಭೇಟಿಯಾಗಿ ಸಂಸತ್ ಭವನದ ಮೇಲೆ ದಾಳಿ ಮಾಡಲು ಯೋಜಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ನಾಲ್ವರೂ “‘ಭಗತ್ ಸಿಂಗ್ ಫ್ಯಾನ್ ಕ್ಲಬ್” ಹೆಸರಿನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸಂಪರ್ಕ ಹೊಂದಿದ್ದರು.
2001ರ ಸಂಸತ್ತಿನ ಭಯೋತ್ಪಾದಕ ದಾಳಿಗೆ 22ನೇ ವರ್ಷ ತುಂಬಿದ್ದ ಹಿನ್ನೆಲೆಯಲ್ಲಿ ಹುತಾತ್ಮರಿಗೆ ನಮನ ಸಲ್ಲಿಸುವ ದಿನವೇ ಭಾರೀ ಭದ್ರತಾಲೋಪವಾಗಿದ್ದಿ ಈ ಪ್ರಕರಣವನ್ನು ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ








