ಬೆಂಗಳೂರು: ಮಾಜಿ ಸಿಎಂ ಹಾಗೂ ಸಂಸದ ಡಿವಿ ಸದಾನಂದ ಗೌಡ ಅವರು ತಮ್ಮ ಸಕ್ರೀಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸದಾನಂದಗೌಡ, ನಾನು ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ,ಸಕ್ರೀಯ
ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ರಾಜ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.
ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಸಂಪುಟದಲ್ಲಿ 7 ವರ್ಷ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ.ನಾನು ಹೆಚ್ಚು ಆಸೆಪಟ್ಟರೆ, ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆ ಎಂದು ಗೌಡರು ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಬೆಳೆ ನಷ್ಟ ಸಮೀಕ್ಷೆ ನಡೆಸಿದ ಬಳಿಕ ಸದಾನಂದ ಗೌಡ ತಮ್ಮ ರಾಜಕೀಯ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಿಜೆಪಿಯ ವಿವಿಧ ತಂಡಗಳು ಸಮೀಕ್ಷೆ ನಡೆಸುತ್ತಿದ್ದು,ಈ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಲಾಗುತ್ತದೆ.
ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತನಾಡಿದ ಸದಾನಂದ ಗೌಡರು, ಕೇಂದ್ರ ನಾಯಕರು ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ,ಎನ್‌ಡಿಎ ಮೈತ್ರಿಕೂಟದ ವಿಚಾರದ ಕುರಿತಾಗಿ ನಮ್ಮ ಕೇಂದ್ರ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ನಮ್ಮ ಕಾರ್ಯಕರ್ತರು ಇದಕ್ಕೆ ಸಮ್ಮತಿ ಸೂಚಿಸಿಲ್ಲ. ಇಷ್ಟು ವರ್ಷ ವಿರೋಧಿಸಿಕೊಂಡು ಬಂದಿರುವ ಪಕ್ಷದೊಂದಿಗೆ ಏಕಾಏಕಿ ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲವೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುವುದು ಕಷ್ಟವಾಗುತ್ತದೆ. ರಾಜ್ಯದಲ್ಲಿ ಇದನ್ನು ಜಾರಿಗೆ ತರಲು ಸೂಕ್ತ ಮಾರ್ಗಸೂಚಿಗಳನ್ನು ನೀಡುವಂತೆ ನಾವು ಕೇಂದ್ರ ನಾಯಕರಿಗೆ ಮನವಿ ಮಾಡಿದ್ದೇವೆ ಎಂದು ಸದಾನಂದಗೌಡ ಹೇಳಿದ್ದಾರೆ.
ರಾಜ್ಯ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ಇದು ತಮಗೆ ಮುಜುಗರ ಉಂಟು ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ.ವಿಳಂಬವಾಗುತ್ತಿರುವುದಕ್ಕೆ ನಾವು ವಿಷಾದಿಸುತ್ತೇವೆ. ನಮ್ಮ ನಾಯಕರು ಈ ವಿಷಯದ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಐದು ರಾಜ್ಯಗಳ ಚುನಾವಣೆಗಳು ಮುಗಿದ ನಂತರ, ನಾವು ಘೋಷಣೆ ಮಾಡಬಹುದೆಂದು ನಿರೀಕ್ಷಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.