Share this news

ಲೇಖನ: ರೇಷ್ಮಾ ಶೆಟ್ಟಿ ಗೊರೂರು.

ಬಡತನ ಶಾಪವಲ್ಲ, ವರವಾಗಿಸಿಕೊಳ್ಳುವ ವರ ಪುತ್ರರು ಮನೆಯಲ್ಲಿದ್ದಾಗ ಮನೆಯೇ ನಂದಗೋಕುಲವಾಗಬಹುದು ಎನ್ನುವ ಮಾತೊಂದನ್ನು ಅನೇಕ ಹಿರಿಯರು ಹೇಳಿದ್ದನ್ನು ಕೇಳಿಸಿಕೊಂಡ ನನಗೆ ಈ ಸಾಲುಗಳಿಗೆ ಜೀವ ತುಂಬುವ ವ್ಯಕ್ತಿತ್ವವೊಂದು ಕಣ್ಣ ಮುಂದೆ ಕಾಣತೊಡಗುತ್ತದೆ.


ಕಡುಬಡತನದಲ್ಲೇ ಹುಟ್ಟಿ ಮನೆಯ ಮುಗ್ಧ ಮನಸ್ಸುಗಳೊಂದಿಗೆ ತುಂಬು ಶ್ರೀಮಂತಿಕೆಯ ಹೃದಯ ವೈಶಾಲ್ಯತೆಯಲ್ಲಿ ಸದಾ ಎಲ್ಲರೊಂದಾಗಿ ಬೆರೆವ ಕರುಣಾಮಯಿ,ಸಹೃದಯಿ ಸಾಧನರತ್ನ ಹೃದಯ ಶ್ರೀಮಂತ ಚೇತನ್ ವರ್ಕಾಡಿ ಎಂಬ ಅದ್ಭುತ ಬರಹಗಾರ,ನಿರೂಪಕ, ನಾಟಕ ರಚನೆಕಾರನ ಕುರಿತು ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳಲೇಬೇಕೆಂಬ ತುಡಿತ ನನ್ನದು.


ಕೇಶವ ಪೂಜಾರಿ ಹಾಗೂ ಭಾರತಿ ದಂಪತಿಗಳ ಹಿರಿಯ ಪುತ್ರನಾಗಿ 30/5/1988 ರಂದು ವರ್ಕಾಡಿಯಲ್ಲಿ ಜನ್ಮತಳೆದ ಚೇತನ್ ತನ್ನ ಬಡತನದ ಬಾಲ್ಯದ ದಿನಗಳಲ್ಲಿ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಕಳಿಯಾರು ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ,ಶ್ರೀ ವಾಣಿವಿಜಯ ಹೈಸ್ಕೂಲು ಕೂಡ್ಲಮುಗರು ಇಲ್ಲಿ ಪ್ರೌಢ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೆ. ಜೊತೆಹುಟ್ಟುಗಳಾದ ಸುಚರಿತ ಹಾಗೂ ಶ್ವೇತಾ ಎಂಬ ಸಹೋದರಿಯರ ವಿದ್ಯಾಭ್ಯಾಸದ ನಡುವೆ ಕುಡಿತದಚಟಕ್ಕೆ ದಾಸರಾಗಿದ್ದ ಅಪ್ಪ ಜವಾಬ್ದಾರಿಗಳನ್ನು ಹೊರಲಾರದೆ ಕೈಕಟ್ಟಿ ಕುಳಿತಾಗ, ಬೀಡಿಕಟ್ಟುವ ಕಾರ್ಯದಲ್ಲಿ ಮಗ್ನರಾಗಿದ್ದ ತಾಯಿಗೆ, ಬೀಡಿ ಕಟ್ಟುತ್ತಾ ಸಹಾಯದ ಹಸ್ತ ಚಾಚಿದ್ದ ಮಗರಾಯ ತನ್ನ ತಂಗಿಯರ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ, ತನ್ನ ವಿದ್ಯಾಭ್ಯಾಸದ ಕನಸು ಕಂಡನಾದರೂ, ಕನಸು ನನಸಾಗಿಸಿಕೊಳ್ಳುವಲ್ಲಿ ವಿಫಲನಾಗಿ ಆ ಪುಟ್ಟ ವಯಸ್ಸಿನಲ್ಲೇ ಸೆಂಟ್ರಿಂಗ್ ಕೆಲಸವನ್ನು ನಿರ್ವಹಿಸಲಾರಂಬಿಸುತ್ತಾರೆ.
ಅಪ್ಪನನ್ನು ಕಳೆದುಕೊಂಡ ಕುಟುಂಬಕ್ಕೆ ಮನೆಯ ಗಂಡು ದಿಕ್ಕಾಗಿ ಹೆಣ್ಣು ಮಕ್ಕಳಿಬ್ಬರ ವಿವಾಹದ ಜವಾಬ್ದಾರಿಯು ಹೆಗಲೇರಿತ್ತು.ಅದರೊಂದಿಗೆ ಸ್ವಂತ ಸೂರಿಲ್ಲದೆ ಚಿಕ್ಕಮ್ಮನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಕುಟುಂಬಕ್ಕೆ ಎಲ್ಲಾ ಕಠಿಣ ಪರೀಕ್ಷೆಗಳು ಒಟ್ಟಾಗಿ ಹೆಗಲೇರಿದಂತಿದ್ದ ಸಂದರ್ಭದಲ್ಲಿ ಪುಟ್ಟ ವಯಸ್ಸಿನ ಮಗನ ಜವಾಬ್ದಾರಿಗೆ ಹೆತ್ತ ಕರುಳು ಚುರ್ ಅನ್ನುತ್ತಿತ್ತು. ಹಾಗೂ ಹೀಗೂ ಕೈಹಿಡಿದಿದ್ದ ಸೆಂಟ್ರಿಂಗ್ ಕೆಲಸವೇ ಜೀವನಕ್ಕೆ ದಾರಿಯಾಗಿ ಅದನ್ನೇ ಮೂಲ ವೃತ್ತಿಯನ್ನಾಗಿಸಿಕೊಂಡು ತನ್ನ ಹೆತ್ತವಳ ಬೀಡಿ ಕಾಯಕ ಹಾಗೂ ತನ್ನ ಕಾಯಕದಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಿ ಹೆಣ್ಣು ಮಕ್ಕಳಿಬ್ಬರ ವೈವಾಹಿಕ ಜೀವನಕ್ಕೆ ಬೆಳಕು ಚೆಲ್ಲಿಸಿದ ತೃಪ್ತಿ ಚೇತನ್ ರದ್ದಾಯಿತು. ಅದರ ಜೊತೆಗೆ ಸ್ವಂತ ಸೂರಿನ ಕನಸು ಕಂಡಿದ್ದ ಮನೆಯ ಮನಸ್ಸುಗಳಿಗೆ ಕಷ್ಟದ ಜೀವನದಲ್ಲೇ “ಅಪ್ಪೆ ಇಲ್ಲ್” (ಅಮ್ಮನ ಮನೆ) ಎಂಬ ಸುಂದರ ನಾಮಕರಣದೊಂದಿಗೆ ಒಂದು ಸ್ವಂತ ಸೂರಿನ ನಿರ್ಮಾಣವೂ ಆಯಿತು.
ಹೆತ್ತ ತಾಯಿಗೆ ಇಂತಹ ಮಗನ ಪಡೆದು ಜನ್ಮ ಸಾರ್ಥಕವಾಯಿತು ಎಂಬ ಆತ್ಮತೃಪ್ತಿ ಆದರೆ ಮಗನಿಗೆ ಹೆತ್ತವಳ ಹಾಗೂ ಒಡಹುಟ್ಟಿದವರ ಬದುಕಿನಲ್ಲಿ ಆಸೆ ಕನಸುಗಳಿಗೆ ಶ್ರಮ ಹಾಕಿ, ಯಶಸ್ಸು ಕಂಡ ತೃಪ್ತಿದಾಯಕ ಖುಷಿ.


ಇನ್ನು ಇವರ ಬರಹದ ಕಡೆ ಕಣ್ಣಾಡಿಸುತ್ತಾ ಹೊರಟರೆ ಚಿಕ್ಕ ವಯಸ್ಸಿನಲ್ಲಿ ಮುಂದೊಂದು ದಿನ ತಾನೋರ್ವ ಅದ್ಭುತ ಬರಹಗಾರನಾಗಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತೇನೆ ಎಂಬ ಯಾವ ಕಲ್ಪನೆಯೂ ಇವರಲ್ಲಿ ಇರಲಿಲ್ಲ,ಯಾಕೆಂದರೆ ಆ ಸಂದರ್ಭದಲ್ಲಿ ಬರಹದ ಅಭಿರುಚಿ ಆಸಕ್ತಿ ಏನೋ ಇವರಲ್ಲಿರಲಿಲ್ಲ. ಏಳು ವರ್ಷಗಳ ಕೆಳಗೆ ವರ್ಕಾಡಿಯಲ್ಲಿ ಒಂದು ಹೊಸ ಗ್ರಂಥಾಲಯ ತೆರೆದುಕೊಂಡಿತು. ಗ್ರಂಥಾಲಯದಲ್ಲಿಯ ಪುಸ್ತಕಗಳನ್ನು ಕೈಗೆತ್ತಿಕೊಂಡು ಓದುವ ಅಭ್ಯಾಸವನ್ನು ರೂಡಿಸಿಕೊಂಡ ನಂತರ, ಬರವಣಿಗೆಯ ಗೀಳು ಹತ್ತಿಕೊಂಡು ಪುಟ್ಟ ಬರಹಗಳಿಗೆ ಜೀವ ತುಂಬುತ್ತಾ ಆ ಕ್ಷಣಕ್ಕೆ ಮೊದಲಿಗೆ ಅಕ್ಕ ಅನ್ನುವ ಒಂದು ಸಣ್ಣ ಕವನವನ್ನು ರಚನೆ ಮಾಡಿ ಪ್ರೀತಿಯ ಅಕ್ಕನಿಗೆ ಅರ್ಪಣೆ ಮಾಡಿದಾಗ ಅಕ್ಕ ಮಾತ್ರವಲ್ಲದೆ ಅನೇಕರು ಆ ಬರಹವನ್ನು ಮೆಚ್ಚಿ ಕೊಂಡಾದಿದ್ದರು. ಅಲ್ಲಿಂದ ಬರಹದ ಗೀಳು ಹೆಚ್ಚಾಗಿ ಸಣ್ಣಪುಟ್ಟ ಕಥೆ, ಕವನಗಳನ್ನು ಬರೆಯಲಾರಂಭಿಸಿದರು. ಊರಿನ ಸಂತೋಷ್ ಫ್ರೆಂಡ್ಸ್ ಕ್ಲಬ್ ಇವರ ಅಭಿರುಚಿಗೆ ಒತ್ತು ನೀಡಿ ಇಲ್ಲಿಯವರೆಗೂ ಪ್ರೋತ್ಸಾಹದ ಬೆನ್ನೆಲುಬಾಗಿ ಸದಾ ಸಹಕರಿಸುತ್ತಾ ಬಂದ ಸಂಸ್ಥೆಯಾಗಿದೆ. ಹಾಗೆಯೇ ಕೆ ಎನ್ ಟೇಲರ್ ಬರೆದ ತುಳು ‘ತಮ್ಮಲೆ ಅರುವದನ ಕೋಲ’ ಎಂಬ ನಾಟಕಕ್ಕೆ ಮೊದಲ ಬಾರಿಗೆ ಹಾಡು ಬರೆಯುವ ಅವಕಾಶ ಲಭಿಸಿತು ಅದು ಚೇತನ್ರ ಪಾಲಿಗೆ ಬಂದ ಸಾಹಿತ್ಯದ ಮೊದಲ ಸುಂದರ ಸಿಹಿ ಸವಿನೆನಪು,ಈ ಪುಟ್ಟ ಹೆಜ್ಜೆ ನಂತರದ ದಿನಗಳಲ್ಲಿ ನಾಟಕ, ಆಲ್ಬಮ್ ಸಾಂಗ್,ಭಕ್ತಿ ಗೀತೆಗಳು, ಕಂಬಳದ ಹಾಡುಗಳು ಹೀಗೆ ಅನೇಕ ರೀತಿಯ ಬರಹಗಳನ್ನು ನೀಡುವರೇ ಸಮಾಜಕ್ಕೆ ಒಬ್ಬ ಶ್ರೇಷ್ಠ ಬರಹಗಾರನ ಚಿತ್ರಿಸಿ ಕೊಟ್ಟಿತು.


ತುಳು ಬರಹಗಳಲ್ಲಿ ಇವರನ್ನು ಮೀರಿಸುವ ಬರಹಗಾರನಿಲ್ಲ ಎಂಬಷ್ಟು ಹೆಸರು ಹೆಗ್ಗಳಿಕೆಗೆ ಪಾತ್ರನಾದ ಚೇತನ್ ವರ್ಕಾಡಿ ನಾಲ್ಕು ನಾಟಕಗಳನ್ನು ಬರೆದು ಮುಗಿಸಿ ಅನೇಕ ವೇದಿಕೆಗಳಲ್ಲಿ ಪ್ರದರ್ಶನಗೊಳಿಸಿದ ಸಂತಸದಲ್ಲಿದ್ದಾರೆ. ಈ ಮೂಲಕ ಹೊಸ ರಂಗ ಕಲಾವಿದರನ್ನೂ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿದ ಕೀರ್ತಿ ಕೂಡ ಚೇತನ್ ರದ್ದು.
‘ದೇವೆರ್ ಕೈ ಬುಡಯೆರ್’, ‘ಏರೆನ್ ನಂಬೋಡು’,’ಅಂಚಾಯಿನೆಟ್ಟ್ ಇಂಚಾಂಡ್’, ಇನ್ನೊಂದು ನಾಟಕ ಬರೆದು ಮುಗಿಸಿದ್ದರೂ ಶೀರ್ಷಿಕೆ ಅನಾವರಣಗೊಳಿಸಿಲ್ಲ. ಇವರು ಈಗಾಗಲೇ “ಒಸರ್ “ಎಂಬ ತುಳು ಕವನ ಸಂಕಲನವನ್ನು ಹಾಗೂ “ಪೊಸ ಬಿದೆ” ಎಂಬ ಗಾದೆಗಳ ಕೃತಿಯನ್ನು ಲೋ ಕಾರ್ಪಣೆಗೊಳಿಸಿಕೊಂಡಿದ್ದಾರೆ. ಅಕ್ಷರದ ಲೋಕದಲ್ಲಿ ಬೆಳೆದು ನಿಂತ ವೃಕ್ಷವಾದರೂ ಕಿಂಚಿತ್ತು ಅಹಂಕಾರವಿಲ್ಲದ ಸರಳ ಸಜ್ಜನಿಕೆಯ ಚೇತನ್ ವರ್ಕಾಡಿ ಅವರು ಬೆಳೆದು ಬಂದ ದಾರಿಯಲ್ಲಿ ಸಹಕರಿಸಿದ ಸಂಘ ಸಂಸ್ಥೆಗಳನ್ನು ನೆನಪಿಸಿಕೊಂಡು ಸದಾ ಎಲ್ಲರಿಗೂ ಆಭಾರಿಯಾಗಿದ್ದೇನೆ ಎನ್ನುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾವಳ ಒಕ್ಕೂಟ, ತಾನು ವಿದ್ಯೆ ಕಲಿತ ವಿದ್ಯಾಸಂಸ್ಥೆಗಳು, ಹಳೆ ವಿದ್ಯಾರ್ಥಿ ಬಳಗ, ಶಿಕ್ಷಕರ ಬಳಗ, ಮೌನ ಕೋಗಿಲೆ ಬಳಗ, ಮುಖ್ಯವಾಗಿ ಸಂತೋಷ್ ಫ್ರೆಂಡ್ಸ್ ಕ್ಲಬ್,ಪ್ರತ್ಯಕ್ಷವಾಗಿ ಪರೋಕ್ಷವಾಗಿ ತನ್ನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಬರಹಕ್ಕೆ ಪ್ರೇರಣೆಯಾಗಿ ನನ್ನೊಳಗಿನ ಬರಹಕ್ಕೆ ಜೀವ ತುಂಬಿದ್ದಾರೆ ಯೆಂದು ಅವರೆಲ್ಲರಿಗೂ ಧನ್ಯರಾಗುತ್ತಾರೆ, ಇದೇ ಸಂದರ್ಭದಲ್ಲಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿರುವುದನ್ನು ಕೂಡ ಸ್ಮರಿಸಿಕೊಳ್ಳುತ್ತಾರೆ.

ಜೀವನದಲ್ಲಿ ಬಡತನದಿಂದ ಕಲಿತ ಪಾಠ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕೆಂಬ ಹಠ ಹುಟ್ಟಿಸಿದ್ದರ ಜೊತೆಗೆ ಸಂಸ್ಕಾರವಂತರ ಜೊತೆಗಿನ ಒಡನಾಟ ನನ್ನನ್ನು ಬದುಕಿನಲ್ಲಿ ಏನಾದರೂ ಸಾಧಿಸಿಕೊಳ್ಳಬೇಕೆಂಬ ಗಟ್ಟಿತನ ಬೆಳೆಸಿದೆ, ಕೊರಡು ಎಂದು ಎಸೆದಿದ್ದ ಗಂಧದ ಮರದ ತುಂಡೊಂದು ತೇದಿದಾಗಲೇ ಪರಿಮಳ ಊರು ತುಂಬಾ ಪಸರಿಸಿಕೊಂಡು ಅದರ ಸುಗಂಧವನ್ನು ಆಸ್ವಾದಿಸಿ ಹಣೆಗೆ ತಿಲಕವಿಟ್ಟಂತೆ ನನ್ನ ಬದುಕು ಕೂಡ ನಿಮ್ಮೆಲ್ಲರ ಆಶೀರ್ವಾದ ಹಾರೈಕೆಯಿಂದ ಬೆಳಕು ಕಂಡುಕೊಂಡಿದೆ ಎನ್ನುವ ಚೇತನರ ಬದುಕು ಲೋಕ ಮೆಚ್ಚುವಂತೆ ಮತ್ತಷ್ಟು ಸಾಧನೆಯ ಹಾದಿಯ ಪಯಣ ಸುಖದಾಯಕವಾಗಿರಲಿ ಎಂಬುವುದೇ ನಮ್ಮೆಲ್ಲರ ಶುಭ ಹಾರೈಕೆಗಳು.

Leave a Reply

Your email address will not be published. Required fields are marked *