ನವದೆಹಲಿ: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರನ್ನು ಕೇಂದ್ರ ಸರಕಾರ ಆಂದ್ರಪ್ರದೇಶದ ನೂತನ ರಾಜ್ಯಪಾಲರನ್ನಾಗಿಸಿ ನೇಮಿಸಿದೆ.
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯವರಾಗಿರುವ ಅಬ್ದುಲ್ ನಝೀರ್ ಸುಪ್ರೀಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಜನವರಿ 4 ರಂದು ಸೇವೆಯಿಂದ ನಿವೃತ್ತರಾಗಿದ್ದರು.ಕೇಂದ್ರ ಸರ್ಕಾರವು ಅಬ್ದುಲ್ ನಝೀರ್ ಅವರ ಹೆಸರನ್ನು ಅಂತಿಮಗೊಳಿಸಿದ ಹಿನ್ನಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ಮೂರನೇ ರಾಜ್ಯಪಾಲರಾಗಿ ನೇಮಿಸಿ ಭಾನುವಾರ ಅಧಿಸೂಚನೆ ಹೊರಡಿಸಿದ್ದಾರೆ.
ಈ ಹಿಂದೆ ಆಂಧ್ರದ ರಾಜ್ಯಪಾಲರಾಗಿದ್ದ ಬಿಸ್ವಾ ಭೂಷಣ್ ಹರಿಚಂದನ್ ಅವರು ಛತ್ತೀಸ್‌ಗಢದ ರಾಜ್ಯಪಾಲರಾಗಿ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಜೀರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನ್ಯಾಯಮೂರ್ತಿ ನಜೀರ್ ಅವರು ತ್ರಿವಳಿ ತಲಾಖ್ ಪ್ರಕರಣ, ಅಯೋಧ್ಯೆ-ಬಾಬರಿ ಮಸೀದಿ ವಿವಾದ ಪ್ರಕರಣ, ನೋಟು ಅಮಾನ್ಯೀಕರಣ ಪ್ರಕರಣ ಮತ್ತು ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂಬ ತೀರ್ಪು ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ಪ್ರಕಟಿಸಿ ಗಮನಸೆಳೆದಿದ್ದರು.