ಕಾರ್ಕಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಕ್ಷೇತ್ರಗಳಿಗೆ ಸ್ಟಾರ್ ಪ್ರಚಾರಕರಾಗಿ ಹೋಗಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈ ಬಾರಿಯ ಚುನಾವಣೆಯಲ್ಲಿ ಸೋಲಿನ ಭಯದಿಂದ ಸ್ಟಾರ್ ಕ್ಯಾಂಪೇನರ್ ಕರೆಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಹೇಳಿದರು
ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಕಾಂಗ್ರೆಸ್ ಗೆ ಸ್ಟಾರ್ ಪ್ರಚಾರಕರ ಅವಶ್ಯಕತೆಯಿಲ್ಲ ನಮಗೆ ನಮ್ಮ ಅಮೂಲ್ಯ ಕಾರ್ಯಕರ್ತರೇ ನಮ್ಮ ಸ್ಟಾರ್ ಕ್ಯಾಂಪೇನರ್ ಎಂದರು. ಶಾಸಕರ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ವಿರುದ್ಧ ಕಾರ್ಕಳ ಕ್ಷೇತ್ರದಾದ್ಯಂತ ಆಕ್ರೋಶದ ಅಲೆ ಎದ್ದಿದೆ, ಈ ಬಾರಿಯ ಚುನಾವಣೆಯನ್ನು ಹೇಗಾದರೂ ಮಾಡಿ ಗೆಲ್ಲಬೇಕೆನ್ನುವ ಉದ್ದೇಶದಿಂದ ಯೋಗಿ, ಅಣ್ಣಾಮಲೈ ಅವರಂತಹ ಸ್ಟಾರ್ ಪ್ರಚಾರಕರನ್ನು ಕಾರ್ಕಳ ಕ್ಕೆ ಕರೆಸಿಕೊಳ್ಳುತ್ತಿದ್ದಾರೆ,ಯೋಗಿ ಆದಿತ್ಯನಾಥ್ ಆಗಮನದಿಂದ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ,ಸುನಿಲ್ ಕುಮಾರ್ ಪರವಾಗಿ ಪ್ರಚಾರಕ್ಕೆ ಬಂದಿರುವ ಯೋಗಿ ಭ್ರಷ್ಟಾಚಾರದ ಕುರಿತು ಯಾಕೆ ಮೌನ ವಹಿಸಿದ್ದಾರೆ ಎಂದು ಶುಭದ್ ರಾವ್ ಪ್ರಶ್ನಿಸಿದರು.
ಸುನಿಲ್ ಕುಮಾರ್ ಅವರ ಇಂಧನ ಇಲಾಖೆಗೆ ಸಂಬಂಧಿಸಿದ ಭ್ರಷ್ಟಾಚಾರ ಕುರಿತಂತೆ ಖಾಸಗಿ ಸುದ್ದಿವಾಹಿನಿಯೊಂದು ಪವರ್ ಕಟ್ ಎನ್ನುವ ಶೀರ್ಷಿಕೆಯಡಿ ಕಾರ್ಯಕ್ರಮ ಪ್ರಸಾರ ಮಾಡುವುದಕ್ಕೆ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಒಂದುವೇಳೆ ಶಾಸಕರು ತಪ್ಪು ಮಾಡದಿದ್ದರೆ ತಡೆಯಾಜ್ಞೆ ತರುವ ಅವಶ್ಯಕತೆ ಇತ್ತೇ ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ರೈತರ ಕೃಷಿ ಪಂಪ್ ಸೆಟ್ ಗಳಿಗೆ ಬಳಕೆಯಾಗುತ್ತಿರುವ ವಿದ್ಯುತ್ ಬಿಲ್ಲಿನಲ್ಲೂ ಭಾರೀ ಅವ್ಯವಹಾರ ನಡೆದಿದ್ದು,ಇಂಧನ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಶುಭದ್ ರಾವ್ ಆರೋಪಿಸಿದರು.