ಕಾರ್ಕಳ: ಕನ್ನಡ ಕುರಿತಂತೆ ಸಾಕಷ್ಟು ಚಟುವಟಿಕೆಗಳನ್ನು ನಡೆಸಲಾಗಿದೆ. ಭಾಷೆ, ಸಂಸ್ಕೃತಿ ಮತ್ತು ನಾಗರಿಕತೆ ಒಂದಕ್ಕೊಂದು ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಭಾರತ ಸಾಂಸ್ಕೃತಿಕ ರಾಷ್ಟ್ರ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ ಭಾರತವನ್ನು ಶ್ರೀಮಂತಗೊಳಿಸಿದೆ. ಸಮಾಜದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆದಾಗ, ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕ ವತಿಯಿಂದ ಎಸ್‌ವಿಟಿ ವಿದ್ಯಾಸಂಸ್ಥೆಗಳ ಅಂಡಾರು ವಿಠಲ ರುಕ್ಮಿಣಿ ಸಭಾಂಗಣದ ಪ್ರೋ.ಎಂ. ರಾಮಚಂದ್ರ ವೇದಿಕೆಯಲ್ಲಿ ಇಂದು ನಡೆದ 18ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ವಿಧೇಯಕ ಮಸೂದೆ ಮಂಡನೆಯಾಗಲಿದ್ದು, ನನ್ನ ಅವಧಿಯಲ್ಲೇ ಈ ಅವಕಾಶ ದೊರೆತಿರುವ ಸಂತೃಪ್ತಿಯಿದೆ. ಉಡುಪಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಕಾದಿರಿಸುವುದಾಗಿ ಭರವಸೆ ನೀಡಿದರು.
ಸಮ್ಮೇಳನಾಧ್ಯಕ್ಷೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಯು.ಬಿ. ರಾಜಲಕ್ಷ್ಮೀ ಮಾತನಾಡಿ, ಸಾಹಿತ್ಯ ಮತ್ತು ಪತ್ರಿಕೆ ಇವೆರಡೂ ಕ್ಷೇತ್ರದ ಮುಖ್ಯ ಉದ್ದೇಶ ಸಂವಹನ. ಹೀಗಾಗಿ ಭಾಷೆ ಇಲ್ಲಿ ಪ್ರಧಾನ. ಭಾಷೆ ಸಂವಹನದ ಸಂಸ್ಕಾರಗಳನ್ನಷ್ಟೇ ರೂಪಿಸುವುದಿಲ್ಲ, ಸೃಜನಶೀಲತೆಯನ್ನೂ ಪ್ರಚೋದಿಸುತ್ತದೆ. ಇಲ್ಲಿ ಬರೆಯುವವನಿಗೂ ಬರೆದದ್ದನ್ನು ಓದುವವನಿಗೂ ಭಾಷಾಜ್ಞಾನ ಅನಿವಾರ್ಯ. ಈ ಕಾರಣದಿಂದ ಭಾಷೆ ಇಲ್ಲದಿದ್ದರೆ ಸಾಹಿತ್ಯವೂ ಇಲ್ಲ, ಪತ್ರಿಕೋದ್ಯಮವೂ ಇಲ್ಲ. ಆಗ ಇಡೀ ಜಗತ್ತೇ ಪುರಾತನ ಶಿಲಾಯುಗಕ್ಕೆ ಹೊರಳುತ್ತದೆ. ಸಾಹಿತಿ ಮತ್ತು ಪತ್ರಕರ್ತನಾದವನು ಎಷ್ಟರಮಟ್ಟಿಗೆ ಯಶಸ್ವಿಯಾಗಿ ಭಾಷೆಯನ್ನು ದುಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವರ ಸಂವಹನ ಕ್ರಿಯೆಯ ಯಶಸ್ಸು ನಿರ್ಧಾರವಾಗುತ್ತದೆ ಎಂದರು.
ಹಿರಿಯ ಸಾಹಿತಿ ಮತ್ತು ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಬೆರೆತು ಹೊಸ ಮನ್ವಂತರಕ್ಕೆ ಕಾರಣವಾಗಲಿ. ಸಾಹಿತ್ಯ ಸಮ್ಮೇಳನ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದರು.
ಜಿಲ್ಲಾ ಕನ್ನಡ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಸಮಗ್ರ ಭಾಷಾ ವಿಧೇಯಕ ಮಂಡನೆಯ ಜತೆಗೆ ಉಡುಪಿಯಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂದರು.
ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಪಿ.ಶೆಣೈ ಅವರು ಡಾ.ಯು.ಬಿ.ರಾಜಲಕ್ಷ್ಮೀ “ವಿಸ್ಮಯ ಚರಿತರು” ಎಂಬ ಪುಸ್ತಕ ಬಿಡುಗಡೆಗೊಳಿಸಿ, ಕಲ್ಲಿನಲ್ಲಿ ಹುಟ್ಟಿದ ಶಿಲ್ಪ ಚಿರಸ್ಥಾಯಿಯಾಗಿ ಉಳಿಯುತ್ತದೆ. ಕಾರ್ಕಳದಲ್ಲಿ ಹುಟ್ಟಿದ ಪುಸ್ತಕ ಎಲ್ಲರ ಮನಸನ್ನು ಗೆಲ್ಲಲಿ ಎಂದರು.
ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ, ಶಿಕ್ಷಣಾಧಿಕಾರಿ ಚಂದ್ರಯ್ಯ, ಸಾಹಿತಿ ಜನಾರ್ದನ ಭಟ್ , ಸಮಿತಿಯ ಸಂಚಾಲಕ ಎಸ್.ನಿತ್ಯಾನಂದ ಪೈ, ವಿಠಲ ಬೇಲಾಡಿ, ಪುಂಡಲಿಕ ಮರಾಠೆ, ಶ್ರೀನಿವಾಸ ಭಂಡಾರಿ, ರವಿರಾಜ್, ಮುನಿರಾಜ ರೆಂಜಾಳ, ಯೋಗೇಂದ್ರ ನಾಯಕ್, ಉಷಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.