ಬೆಂಗಳೂರು : ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ ಕರಾರುಪತ್ರ ಬೇಕು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಗೃಹಜ್ಯೋತಿ ಯೋಜನೆ ಜಾರಿ ವಿಚಾರಕ್ಕೆ ಸಂಬAಧಿಸಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 200 ಯೂನಿಟ್‌ಗಿಂತ ಕಡಿಮೆ ಬಳಕೆದಾರರು 2.16 ಕೋಟಿ ಇದ್ದಾರೆ.200 ಯೂನಿಟ್ ವಿದ್ಯುತ್ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ. 12 ತಿಂಗಳ ಸರಾಸರಿ ಆಧಾರದ ಮೇಲೆ 10% ಹೆಚ್ಚು ವಿದ್ಯುತ್ ಬಳಕೆ ಉಚಿತವಾಗಿರುತ್ತದೆ . ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಸೇವಾಸಿಂಧು ಆ್ಯಪ್‌ನಲ್ಲಿ ಜನ ಅರ್ಜಿ ಹಾಕಬೇಕು ಎಂದರು.

ಜುಲೈ ತಿಂಗಳಿನ ಬಿಲ್ ಆಗಸ್ಟ್ ನಲ್ಲಿ ಪಾವತಿ ಮಾಡುವುದು ಬೇಡ. 2 ಲಕ್ಷ ಗ್ರಾಹಕರು ಮಾತ್ರ 200 ಯೂನಿಟ್‌ಗಿಂತ ಹೆಚ್ಚಾಗಿ ಬಳಕೆ ಮಾಡುತ್ತಾರೆ. 2 ಕೋಟಿ 14 ಲಕ್ಷ ಗ್ರಾಹಕರಿಗೆ ಈ ಯೋಜನೆ ಲಾಭ ಸಿಗುತ್ತದೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಏರಿಕೆಯಾಗಿತ್ತು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಾರಿಗೆ ಬಂದಿರಲಿಲ್ಲ. ಚುನಾವಣೆ ಮುಗಿದ ನಂತರ ಹಿಂದಿನ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ಜಾರಿಗೆ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ನಮ್ಮ ಸರ್ಕಾರದ ಬಡವರು, ಮಧ್ಯಮ ವರ್ಗದವರನ್ನು ರಕ್ಷಿಸುತ್ತಿದೆ. ಬಡವರು ಬಿಲ್ ಕಟ್ಟುವುದೇ ಬೇಡ ಎಂದು ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ ಎಂದರು.



