ಮಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಹಾಗೂ ತನ್ನದೇ ಆದ ಐತಿಹ್ಯವನ್ನು ಹೊಂದಿರುವ ಪಟ್ಟಣವೇ ಪುತ್ತೂರು.
ದಂತಕಥೆಯ ಪ್ರಕಾರ ಪ್ರಸ್ತುತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಪಶ್ಚಿಮ ಭಾಗದಲ್ಲಿರುವಂತಹ ಕೆರೆಯನ್ನು ಹಿಂದೊಮ್ಮೆ ಎಷ್ಟೇ ಅಗೆದರೂ ನೀರು ಸಿಗದೇ ಇದ್ದಂತಹ ಸಂದರ್ಭದಲ್ಲಿ ವರುಣ ದೇವರಿಗೆ ಪೂಜೆ ಸಲ್ಲಿಸಿದಾಗ ಕೆರೆಯೊಳಗೆ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಬೇಕೆಂದು ತಿಳಿಯಿತು. ಅದರಂತೆಯೇ ಅನ್ನ ಸಂತರ್ಪಣೆಗೆ ವ್ಯವಸ್ಥೆಯನ್ನು ಮಾಡಿ ಬ್ರಾಹ್ಮಣರು ಊಟ ಮಾಡುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತು. ಆಗ ಅಲ್ಲಿ ಸೇರಿದವರೆಲ್ಲರೂ ಎಲೆಯಲ್ಲಿದ್ದ ಊಟವನ್ನು ಅಲ್ಲೇ ಬಿಟ್ಟು ಓಡಿದರು. ಅವರು ಹಿಂದೆ ಬಂದು ನೋಡಿದಾಗ ಎಲೆಯಲ್ಲಿದ್ದ ಅನ್ನದ ಅಗಳುಗಳು ಮುತ್ತುಗಳಾಗಿ ಬದಲಾಗಿದ್ದವು ಎಂದೂ, ಈ ಮುತ್ತುಗಳು ಬೆಳೆದ ಊರು ಮುತ್ತೂರು ಎಂದಾಗಿ, ಮುಂದೆ ಕ್ರಮೇಣ ಜನರ ಬಾಯಲ್ಲಿ ಪುತ್ತೂರು ಎಂದಾಯಿತು ಎಂಬುದು ಸ್ಥಳೀಯರ ನಂಬಿಕೆ.
ಪ್ರಾಗೈತಿಹಾಸ
ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಪಟ್ಟಂತೆ ಪುತ್ತೂರಿನ ಕಡಬ ಎಂಬಲ್ಲಿ ಬೃಹತ್ ಶಿಲಾಯುಗ ಕಾಲದ ಗುಹಾ ಸಮಾಧಿಯು ಪತ್ತೆಯಾಗಿದ್ದು, ಸಮಾಧಿಯ ಮಧ್ಯಭಾಗದಲ್ಲಿ 2-3 ಅಡಿ ವ್ಯಾಸದ ವೃತ್ತಾಕಾರದ ರಚನೆಯನ್ನು ಕಾಣಬಹುದಾಗಿದೆ. ಆದ್ದರಿಂದ ಈ ಸಮಾಧಿಯು ಅಪರೂಪದ ಬೃಹತ್ ಶಿಲಾಯುಗದ ಸಮಾಧಿಯಾಗಿದ್ದು, ಪುತ್ತೂರಿನ ಇತಿಹಾಸವನ್ನು ಸುಮಾರು 3೦೦೦ ಸಾವಿರ ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ.
ಪುತ್ತೂರು ಒಂದು ಕಾಲದಲ್ಲಿ ಬಂಗ ರಾಜ ಮನೆತನದ ರಾಜಧಾನಿಯಾಗಿತ್ತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯವನ್ನು ಇವರೇ ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಿರುತ್ತಾರೆ ಎಂಬುದು ಐತಿಹಾಸಿಕ ದಾಖಲೆಗಳು ತಿಳಿಸುತ್ತದೆ. ಈ ದೇವಾಲಯವು ಹಲವಾರು ವಿಶೇಷತೆಗಳಿಂದ ಕೂಡಿದ್ದು ಮೊದಲನೆಯದಾಗಿ ಮಹಾಲಿಂಗೇಶ್ವರನ ಮುಂದೆ ಇರುವಂತಹ ಮೂರುವರೆ ಕಾಲಿನ ನಂದಿ. ಇದರ ಉಳಿದ ಅರ್ಧಕಾಲು ದೇವಳದ ಐತಿಹಾಸಿಕ ಗದ್ದೆಯಲ್ಲಿ ಕಲ್ಲಿನ ರೂಪದಲ್ಲಿದೆ ಎಂಬುದು ಗಮನಾರ್ಹ ಸಂಗತಿ. ಇನ್ನೊಂದು ವಿಶೇಷತೆ ಏನೆಂದರೆ ಕಾಶಿಯಲ್ಲಿ ಬಿಟ್ಟರೆ ದೇವಾಲಯದ ಎದುರು ರುದ್ರಭೂಮಿ ಇರುವ ಮತ್ತೊಂದು ದೇವಾಲಯವೆಂದರೆ ಅದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯ ಮಾತ್ರ. ಈ ದೇವಾಲಯದಲ್ಲಿ ನಾಲ್ಕು ಶಾಸನಗಳು, ಒಂದು ಮಾಸ್ತಿ ಕಲ್ಲು ಹಾಗೂ ಒಂದು ವೀರಗಲ್ಲು ಇದ್ದು ದೇವಾಲಯದ ಐತಿಹಾಸಿಕತೆಗೆ ಹಿಡಿದ ಕೈಗನ್ನಡಿಯಾಗಿದೆ.
ಪುತ್ತೂರಿನ ಮಗದೊಂದು ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶವೆಂದರೆ ಅದು ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರ ಜನ್ಮಸ್ಥಾನ ಇರುವಂತಹ ಪಡುಮಲೆ. ಇಲ್ಲಿ ಇಂದಿಗೂ ಅವರು ಹುಟ್ಟಿ ಬೆಳೆದಂತಹ ಮನೆಯನ್ನು ಕಾಣಬಹುದು.
ಮಾಯ್ ದೇ ದೇವುಸ್ ಚರ್ಚ್ ನ್ನು 1830ರಲ್ಲಿ ಗೋವಾದ ರೋಮನ್ ಕ್ಯಾಥೋಲಿಕ್ ಮಿಷನರಿಗಳು ಗೋಥಿಕ್ ಶೈಲಿಯಲ್ಲಿ ನಿರ್ಮಿಸಿದ್ದು, ಇದು ಪುತ್ತೂರು ಹಾಗೂ ಇದರ ಸುತ್ತಮುತ್ತಲಿನ ಪ್ರದೇಶದ ಕ್ರೈಸ್ತ ಧರ್ಮೀಯರ ಪ್ರಮುಖ ಹಾಗೂ ಪವಿತ್ರ ಪ್ರಾರ್ಥನಾ ಕೇಂದ್ರವಾಗಿದೆ.
ಪುತ್ತೂರಿನಲ್ಲಿ ಜೈನ ಧರ್ಮಕ್ಕೆ ಸಂಬಂಧಪಟ್ಟಂತೆ ಪ್ರಮುಖವಾಗಿ ಶ್ರೀ ಶಾಂತಿನಾಥ ಸ್ವಾಮಿ ದಿಗಂಬರ ಜೈನ ಬಸದಿಯನ್ನು ನೋಡಬಹುದು.
ಪುತ್ತೂರಿನಲ್ಲಿ ಕಾಣಬಹುದಾದ ಇನ್ನೊಂದು ವಿಶೇಷ ಸ್ಥಳವೆಂದರೆ ಅದು ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆ ಆದಂತಹ “ಬೆಂದ್ರ್ ತೀರ್ಥ”.
ಪುತ್ತೂರು ಎಂಬ ಈ ಪಟ್ಟಣವು ಕನ್ನಡದ ಹಿರಿಯ ಹಾಗೂ ಅತ್ಯಂತ ಪ್ರಸಿದ್ಧ ಕವಿಗಳಾಗಿದ್ದಂತಹ ಶಿವರಾಮ ಕಾರಂತರ ಕರ್ಮ ಭೂಮಿಯಾಗಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ಇಂದಿಗೂ ಪುತ್ತೂರಿನ ಪರ್ಲಡ್ಕದಲ್ಲಿ ಶಿವರಾಮ ಕಾರಂತರ ನಿವಾಸವನ್ನು ಹಾಗೂ ಅವರು ತಮ್ಮ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿ ಕೊಡುತ್ತಿದ್ದಂತಹ ಸಭಾಂಗಣವನ್ನು ಕಾಣಬಹುದು.
ಪ್ರಸ್ತುತ ಎಲ್ಲಾ ರೀತಿಯ ಸೌಲಭ್ಯಗಳಾದ ಸಾರಿಗೆ ವ್ಯವಸ್ಥೆ, ಶಿಕ್ಷಣ ಕೇಂದ್ರಗಳು, ಮಸೀದಿಗಳು, ಆರೋಗ್ಯ, ಅಂಚೆ ಕಛೇರಿ, ಕ್ರೀಡಾ ಮೈದಾನಗಳನ್ನು ಒಳಗೊಂಡಿರುವ ಪುತ್ತೂರು ತನ್ನಲ್ಲಿನ ಪ್ರಾಚೀನ ಆಚರಣೆಗಳನ್ನು ಇಂದಿಗೂ ಉಳಿಸಿ, ಬೆಳೆಸಿಕೊಂಡು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ನಂತರದ ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ನಗರವಾಗಿದೆ.
ಲೇಖನ:ವಿಶಾಲ್.ರೈ.ಕೆ, ಅಂತಿಮ ಬಿ.ಎ ವಿದ್ಯಾರ್ಥಿ,ಎಂ.ಎಸ್.ಆರ್.ಎಸ್ ಕಾಲೇಜು – ಶಿರ್ವ