ಹೆಬ್ರಿ : ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆ ಪೇಜಾವರ ಮಠ ಉಡುಪಿ ಇದರ ಆಶ್ರಯದಲ್ಲಿ ಗೋವುಗಳಿಗಾಗಿ ಸುಮಾರು 12 ಲಕ್ಷ ವೆಚ್ಚದ ಅಧೋಕ್ಷಜ ತೀರ್ಥ ಸರೋವರವನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಉದ್ಘಾಟಿಸಿದರು.
ಸರೋವರದಲ್ಲಿ ಶ್ರೀ ಮಠದ ಪಟ್ಟದ ದೇವರಿಗೆ ವಾರ್ಷಿಕ ಮಹಾಅಭಿಷೇಕ, ಉದ್ವರ್ತನಾ ಕಾರ್ಯಕ್ರಮದೊಂದಿಗೆ ಆಶೀರ್ವಚನ ನೀಡಿದ ಶ್ರೀಗಳು ಸಂಸ್ಕೃತ ಭಾಷೆಯಲ್ಲಿ ನೀರಿಗೆ ಜೀವನ ಎಂಬ ಹೆಸರು ಇದೆ. ಜಗತ್ತಿನ ಎಲ್ಲಾ ಪಶು, ಪಕ್ಷಿ, ಪ್ರಾಣಿಗಳಿಗೆ ಬದುಕಲು ಬೇಕಾದದ್ದು ನೀರು, ಅಂತಹ ಸರೋವರ ನಿರ್ಮಾಣ ಮಾಡಿ, ನಮ್ಮ ಗೋಶಾಲೆಯಲ್ಲಿ ಗೋವುಗಳ ಅಂತರ್ಯಾಮಿಯಾದ ಮೂವತ್ತಮೂರು ಕೋಟಿ ದೇವತೆಗಳ ಅನುಗ್ರಹಕ್ಕೆ ಪಾತ್ರರಾಗುವುದಲ್ಲದೆ, ಪ್ರತಿಯೊಬ್ಬರೂ ಕೂಡಾ ಬದುಕಿನಲ್ಲಿ ಪರೋಪಕಾರವನ್ನು ಮಾಡಬೇಕು ಎಂದರು.
ಸರೋವರ ನಿರ್ಮಾಣಕ್ಕೆ ಸ್ಥಳ ದಾನ ಮಾಡಿದ ಶ್ರೀಮತಿ ಜಾನಕಿ ಮತ್ತು ಶ್ರೀಧರ ಉಪಾಧ್ಯಾಯ ಹಾಗೂ ಸರೋವರ ನಿರ್ಮಾಣಕ್ಕೆ ದೇಣಿಗೆ ನೀಡಿ ಸಹಕರಿಸಿದ ಶ್ರೀಮತಿ ಭೀಮಕ್ಕ ಪುಟ್ಟಣ್ಣ ಭಟ್ ಇವರ ಸ್ಮರಣಾರ್ಥ ಶಿವಪುರ ಮಾರ್ಮಕ್ಕಿ ಮಠದ ರಾಮಕೃಷ್ಣ ಭಟ್ ಮತ್ತು ವಂಶಸ್ಥರು ಹಾಗೂ ನಾಡಿನ ಅನೇಕ ದಾನಿಗಳಿಗೆ ಭಗವಂತನು ಅನುಗ್ರಹಿಸಲಿ ಎಂದರು. ಶ್ರೀಗಳ 60 ಸಂವತ್ಸರದ ಅಂಗವಾಗಿ 60 ವಿಪ್ರರಿಂದ ಪವಮಾನ ಪಾರಾಯಣ ನಡೆಯಿತು.
ಈ ಸಂದರ್ಭದಲ್ಲಿ ಗೋಶಾಲೆಯ ಟ್ರಸ್ಟ್ ನ ಗಿಲ್ಲಾಳಿ ಪದ್ಮನಾಭ ಆಚಾರ್ಯ, ರವಿ ರಾವ್, ವಿಷ್ಣುಮೂರ್ತಿ ಆಚಾರ್ಯ, ಗುರುದಾಸ್ ಶೆಣೈ, ಡಾ. ಭಾರ್ಗವಿ ಐತಾಳ್, ವಿಷ್ಣುಮೂರ್ತಿ ನಾಯಕ್, ಯೋಗೀಶ್ ಭಟ್, ಲಕ್ಷ್ಮೀನಾರಾಯಣ ನಾಯಕ್, ಶ್ರೀಕಾಂತ್ ಭಟ್, ಬಾಲಕೃಷ್ಣ ನಾಯಕ್, ಐತು ಕುಲಾಲ್ ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.