ಹೆಬ್ರಿ: ಅಧಿಕಾರ, ಹಣ ಮಾಡುವ ಉದ್ದೇಶ ನನಗಿಲ್ಲ,ಕಾರ್ಕಳದಲ್ಲಿ ಭ್ರಷ್ಟಾಚಾರ ರಹಿತ ,ಪಾರದರ್ಶಕ ಆಡಳಿತ ಹಾಗೂ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಕಾರ್ಕಳ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಹೇಳಿದರು
ಅವರು ಹೆಬ್ರಿಯಲ್ಲಿ ಶನಿವಾರ ನಡೆದ ಪ್ರಜಾವಿಜಯ ಬಹಿರಂಗ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಿಂದುತ್ವ ಎನ್ನುವವರಿಂದ ಗೋರಕ್ಷಣೆಯಾಗಿಲ್ಲ,ನನ್ನನ್ನು ಆಶೀರ್ವದಿಸಿದ್ದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗೋಶಾಲೆ ಪ್ರಾರಂಭಿಸಿ ಗೋಮಾತೆಯ ರಕ್ಷಣೆ ಮಾಡುತ್ತೇನೆ ಮಾತ್ರವಲ್ಲದೇ ಕಾರ್ಕಳವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು. ಆರೆಸ್ಸೆಸ್ ಸಿದ್ದಾಂತದಿಂದ ಅಧಿಕಾರಕ್ಕೆ ಬಂದವರಿಂದ ಹಿಂದುತ್ವದ ರಕ್ಷಣೆಯಾಗುತ್ತಿಲ್ಲ,ಲಕ್ಷಾಂತರ ಹಿಂದೂ ಕಾರ್ಯಕರ್ತರ ಬಲಿದಾನದಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ,ಹಿಂದುತ್ವ ಮರೆತವರಿಗೆ ಜನ ಪಾಠ ಕಲಿಸಲಿದ್ದಾರೆ ಎಂದರು.
ತೆಲಂಗಾಣದ ಶಾಸಕ ರಾಜಾಸಿಂಗ್ ಠಾಕೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೂಗಳ ಮಠ,ಮಂದಿರಗಳನ್ನು ಒಡೆಯುವವರು,ಲೂಟಿಕೋರರನ್ನು ಅಧಿಕಾರದಿಂದ ದೂರವಿಡಬೇಕಿದೆ ಎಂದರು.
ರಾಜ್ಯದಲ್ಲಿ ಸುಮಾರು 55ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ ಹತ್ಯೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಹಿರಿಯ ಶಾಸಕರಾಗಿ ಮುತಾಲಿಕ್ ವಿಧಾನಸಭೆ ಪ್ರವೇಶಿಸಬೇಕು ಈ ನಿಟ್ಟಿನಲ್ಲಿ ಮುತಾಲಿಕ್ ಅವರಿಗೆ ಮತ ನೀಡುವಂತೆ ರಾಜಾಸಿಂಗ್ ಠಾಕೂರ್ ಮನವಿ ಮಾಡಿದರು.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ, ಹಿಜಾಬ್ ನಿಷೇಧಿಸಿರುವುದು ಸ್ವಾಗತಾರ್ಹ,ಆದರೂ ಗೋಹತ್ಯೆ,ಮತಾಂತರ ಪ್ರಕ್ರಿಯೆ ನಿಲ್ಲುತ್ತಿಲ್ಲ. ಕರ್ನಾಟಕದಲ್ಲಿ ಭಗವಾಧ್ವಜ ಎಂದಿಗೂ ಇಳಿಯಬಾರದು,ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಅದಕ್ಕಾಗಿ ಮುತಾಲಿಕ್ ಅವರನ್ನು ಮುಂದಿನ ಚುನಾವಣೆಯಲ್ಲಿ ಆರಿಸಿ ವಿಧಾನಸಭೆಗೆ ಕಳುಹಿಸಬೇಕೆಂದರು.
ರಮೇಶ್ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸುಧೀರ್ ಹೆಬ್ರಿ,ವಿವೇಕಾನಂದ ಶೆಣೈ ಕಾರ್ಕಳ,ಸುಭಾಶ್ಚಂದ್ರ ಹೆಗ್ಡೆ, ಅಶ್ವಿನಿ ಶಿವಮೊಗ್ಗ, ದಿವ್ಯಾ ನಾಯಕ್,ರೂಪ ಶೆಟ್ಟಿ, ಪರೇಶ್ ಮೇಸ್ತ ಸಹೋದರ ರಾಹುಲ್ ಮೇಸ್ತ, ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ವಿನಯ ರಾನಡೆ ಮಾಳ, ಆನಂದ ಅಡ್ಯಾರ್, ನಾಗೇಶ್ ಪೈ ಕಾರ್ಕಳ, ರಾಘವ ನಾಯ್ಕ್, ಪ್ರವೀಣ್ ಕಾಂತರಗೋಳಿ,ಶ್ರೀರಾಮ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ರತ್ನಾವತಿ ನಾಯಕ್ ಹಿರ್ಗಾನ, ವಾಸುದೇವ ಶೆಟ್ಟಿಗಾರ್, ಮುಂತಾದವರು ಉಪಸ್ಥಿತರಿದ್ದರು.
ನ್ಯಾಯವಾದಿ ಹರೀಶ್ ಅಧಿಕಾರಿ ಸ್ವಾಗತಿಸಿ,ರಾಜೇಶ್ ಕುಡಿಬೈಲು ಕಾರ್ಯಕ್ರಮ ನಿರೂಪಿಸಿದರು