Share this news

 

 

ಬೆಂಗಳೂರು, ಜುಲೈ 26: ಬಡ ರೋಗಿಗಳಿಗೆ ಆಶಾದಾಯಕವಾಗಿರುವ‌ 108 ಆರೋಗ್ಯ ಕವಚ ತುರ್ತುಚಿಕಿತ್ಸಾ ವಾಹನದ ಸಿಬ್ಬಂದಿಗಳು ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆ.,1 ರಿಂದ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
108 ಆರೋಗ್ಯ ಕವಚ ಸೇವೆಯನ್ನು ಇಷ್ಟು ದಿನಗಳ ಕಾಲ ಜಿವಿಕೆ ಎಂಬ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು,ಇನ್ನುಮುಂದೆ ಆರೋಗ್ಯ ಇಲಾಖೆಯೇ ನಿರ್ವಹಣೆ ಮಾಡುವುದಾಗಿ ಘೋಷಿಸಿದೆ. ಈವರೆಗೂ ಒಂದೇ ಸಂಸ್ಥೆಯ ನಿರ್ವಹಣೆ ಅಡಿಯಲ್ಲಿ 3500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಇವರನ್ನೇ ಮುಂದುವರಿಸುವ ಬಗ್ಗೆ ಸರ್ಕಾರ ಅಥವಾ ಇಲಾಖೆ ಸ್ಪಷ್ಟತೆ ನೀಡಿಲ್ಲ. ಅಲ್ಲದೆ ಹಲವು ಸಮಸ್ಯೆ ಹಾಗೂ ಬೇಡಿಕೆಗಳನ್ನು ನೌಕರರು ಮುಂದಿಟ್ಟಿದ್ದಾರೆ. ಸರ್ಕಾರ ಇದಕ್ಕೆ ಸ್ಪಂದಿಸದಿದ್ದಲ್ಲಿ ಆಗಸ್ಟ್ 1 ರಿಂದ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟ ಅನಿವಾರ್ಯ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಹಾಲಿ ಸಿಬ್ಬಂದಿಗಳಿಗೆ ದಿನಕ್ಕೆ 2 ಪಾಳಿಯಿಂದ 3 ಪಾಳಿ ಮಾಡಿರುವುದು ಅವೈಜ್ಞಾನಿಕ, ಗ್ರಾಮೀಣ ಪ್ರದೇಶದಲ್ಲಿ ನೌಕರರಿಗೆ ಸಾರಿಗೆ ಸೇವೆ ಇಲ್ಲ ಇದರಿಂದ ಮಹಿಳಾ ಸಿಬ್ಬಂದಿಗೆ ತೀವ್ರ ಸಮಸ್ಯೆ ಉಂಟಾಗಿದೆ, ಹೊಸ ಆಂಬುಲೆನ್ಸ್ ವ್ಯವಸ್ಥೆ ಬಗ್ಗೆ ಗೊಂದಲ, ಜಿಲ್ಲಾ ಮಟ್ಟದಲ್ಲಿ ಏಜೆನ್ಸಿಗಳ ಮೂಲಕ ನೌಕರರ ನೇಮಕ ಬೇಡ ಎಂದಿರುವ ನೌಕರರು,ಒಂದೇ ಸಂಸ್ಥೆ ಮೂಲಕ ನೌಕರರ ನಿರ್ವಹಣೆ ಮಾಡಬೇಕು ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.

 

 

Leave a Reply

Your email address will not be published. Required fields are marked *