
ನವದೆಹಲಿ, ಡಿ.08: ಛತ್ತೀಸ್‌ಗಢದ ಖೈರಾಗಢ್ ಚುಯಿಖಾದನ್ ಗಂಡೈ ಜಿಲ್ಲೆಯಲ್ಲಿ ಸಿಸಿಎಂ ರಾಮಧೇರ್ ಮಜ್ಜಿ ಸೇರಿದಂತೆ 11 ನಕ್ಸಲೀಯರು ಬಕರ್ಕಟ್ಟಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಈ ಪೈಕಿ 6 ಜನ ಮಹಿಳಾ ನಕ್ಸಲರು ಕೂಡ ಶರಣಾಗಿದ್ದು, ಈ ಪಟ್ಟಿಯಲ್ಲಿ ಲಕ್ಷ್ಮಿ, ಶೀಲಾ, ಯೋಗಿತಾ, ಕವಿತಾ ಮತ್ತು ಸಾಗರ್, ಡಿವಿಸಿಎಂ (ವಿಭಾಗೀಯ ಸಮಿತಿ ಸದಸ್ಯೆ) ಲಲಿತಾ ಮತ್ತು ಡಿವಿಸಿಎಂ ಜಾನಕಿ ಇದ್ದಾರೆ.
ಎಂಎAಸಿ ವಲಯದಲ್ಲಿ ಸಕ್ರಿಯವಾಗಿರುವ ಸಿಸಿ (ಕೇಂದ್ರ ಸಮಿತಿ) ಸದಸ್ಯ ಮಜ್ಜಿ ತಮ್ಮ ವಿಭಾಗೀಯ ಸಮಿತಿ ಸದಸ್ಯರ ಜೊತೆಗೆ ಬಂದು ಎಕೆ -47 ರೈಫಲ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿದರು. ಅವರೊಂದಿಗೆ ಎಸಿಎಂ ರಾಮ್ ಸಿಂಗ್ ದಾದಾ ಮತ್ತು ಎಸಿಎಂ ಸುಕೇಶ್ ಪೊಟ್ಟಮ್ ಕೂಡ ಶರಣಾಗಿದ್ದು, ತಮ್ಮ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದರು.ಎಕೆ-47, ಇನ್ಸಾಸ್ ರೈಫಲ್, ಎಸ್‌ಎಲ್‌ಆರ್, 303 ರೈಫಲ್‌ಗಳು ಮತ್ತು 0.30 ಕಾರ್ಬೈನ್ ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಕುಖ್ಯಾತ ನಕ್ಸಲ್ ರಾಮಧೇರ್ ಮಜ್ಜಿಯ ತಲೆಗೆ ಒಂದು ಕೋಟಿ ರೂ ಬಹುಮಾನ ಪ್ರಕಟಿಸಲಾಗಿತ್ತು. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಪೊಲೀಸ್ ಪಡೆಗಳಿಗೆ ನಕ್ಸಲರ ನಿಗ್ರಹ ಅತ್ಯಂತ ಭೀಕರ ಸವಾಲುಗಳಲ್ಲಿ ಒಂದಾಗಿತ್ತು. ಇದೀಗ ರಾಮಧೇರ್ ಮಜಿ ಶರಣಾಗತಿಯಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ವಲಯದಲ್ಲಿ ಮಾವೋವಾದಿ ಚಳುವಳಿಗೆ ತೀವೃ ಹಿನ್ನಡೆಯಾಗಿದೆ.
.
.
