ಬೆಂಗಳೂರು: ಒಂದನೇ ತರಗತಿಗೆ ಶಾಲೆಗೆ ದಾಖಲಾತಿ ಪಡೆಯಲು ಜೂನ್ 1 ಕ್ಕೆ 6 ವರ್ಷ ತುಂಬಿರಬೇಕು ಎಂಬ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು,ಈ ಬಗ್ಗೆ ಭಾರೀ ಅಸಮಾಧಾನ ಹೊರಹಾಕಿರುವ ಪೋಷಕರು, ಸರ್ಕಾರ ಈ ನಿಯಮ ಸಡಿಲಿಕೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪೋಷಕರ ಸಮೂಹ, ಈಗಾಗಲೇ ಲಕ್ಷಾಂತರ ಮಂದಿ ಮಕ್ಕಳು ಯುಕೆಜಿ ತೇರ್ಗಡೆ ಹೊಂದುತ್ತಿದ್ದು, 6 ವರ್ಷ ತುಂಬಲು 5,10 ದಿನಗಳಷ್ಟೇ ಬಾಕಿ ಇದೆ. ಸರ್ಕಾರದ ಈ ಸುತ್ತೋಲೆಗೆ ಪರಿಣಾಮ ಇವರೆಲ್ಲ ಒಂದನೇ ತರಗತಿಗೆ ಪ್ರವೇಶ ಸಿಗದೇ ಶೈಕ್ಷಣಿಕ ಸಮಯ ವ್ಯರ್ಥ ಮಾಡಿಕೊಳ್ಳುವ ಭೀತಿಯಲ್ಲಿ ಇದ್ದಾರೆ, ಹೀಗಾಗಿ ಸರ್ಕಾರ ಈ ನಿಯಮ ಇದೊಂದು ಬಾರಿ ಸಡಿಲಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪ್ರಕರಣ ನ್ಯಾಯಾಲಯ ಹಂತದಲ್ಲಿದೆ. ಪೋಷಕರು ಹಾಗೂ ಮಕ್ಕಳ ಮನವಿ ಬಗ್ಗೆ ನನಗೂ ಸಹಾನುಭೂತಿ ಇದೆ. ಮುಂದಿನ ದಿನಗಳಲ್ಲಿ ಕೋರ್ಟ್ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದುಕೊಳ್ಳುವ ವಿಚಾರ ಪೋಷಕರು ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
